ಬೆಂಗಳೂರು : ಯಾವುದೆ ಸೂಕ್ತ ಕಾರಣ ನೀಡದೆ ಬಸವನಗುಡಿ ನ್ಯಾಷನಲ್ ಕಾಲೇಜಿನಿಂದ ಡಾ. ರವಿಕುಮಾರ್ ಬಾಗಿ ಅವರನ್ನು ವರ್ಗಾವಣೆ ಮಾಡಿದ್ದೂ ಅಲ್ಲದೆ, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಸೇವಾ ಧೃಡೀಕರಣ ನೀಡದೆ ಕಿರುಕುಳ ನೀಡುತ್ತಿದ್ದ ಆಡಳಿತ ಮಂಡಳಿಯು ಇಂದು ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ವರ್ಗಾವಣೆ ಆದೇಶವನ್ನು ಹಿಂಪಡೆದು, ರವಿಯವರನ್ನು ಸ್ವಸ್ಥಾನದಲ್ಲೇ ಮುಂದುವರಿಸಲಾಗುವುದು. ಜತೆಗೆ, ಅವರ ಪಿಎಚ್‌ಡಿ ಮಾರ್ಗದರ್ಶನಕ್ಕೆ ಶೀಘ್ರದಲ್ಲೇ ಸೇವಾ ದೃಢೀಕರಣವನ್ನೂ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಡಾ. ಸುಬ್ರಮಣ್ಯ ಅವರು ಇಂದು ಘೋಷಿಸಿದರು.
ಡಾ. ರವಿ ಬಾಗಿ ಅವರಿಗೆ ಆಗುತ್ತಿರುವ ಅನ್ಯಾಯ ಹಾಗೂ ದಲಿತ ಎಂಬ ಕಾರಣಕ್ಕೆ ನಡೆಯುತ್ತಿದ್ದ ಕಿರುಕುಳದ ಬಗ್ಗೆ ಚಿಂತಕರಾದ ಬಂಜಗೆರೆ ಜಯಪ್ರಕಾಶ್, ಶ್ರೀಪಾದ್ ಭಟ್, ದಸಂಸ ಹಿರಿಯ ನಾಯಕರಾದ ಮಾವಳ್ಳಿ ಶಂಕರ್, ಬಿ.ಸಿ. ಬಸವರಾಜು ಸೇರಿಸಂತೆ ೫೦ಕ್ಕೂ ಹೆಚ್ಚು ಜನ ಪ್ರಾಧ್ಯಾಪಕರು, ಪತ್ರಕರ್ತರು, ರಂಗಕರ್ಮಿಗಳು ಫೆ.೨ರಂದು ಕಾಲೇಜಿನ ಆಡಳಿತ ಮಂಡಳಿ ಜತೆಗೆ ಮಾತುಕತೆ ನಡೆಸಿದ್ದರು. ಸೋಮವಾರ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದ ಆಡಳಿತ ಮಂಡಳಿ, ಹಿಂಬಡ್ತಿಯನ್ನು ಮಾತ್ರ ರದ್ದುಗೊಳಿಸಿ, ಜಯನಗರ ಪದವಿ ಕಾಲೇಜಿಗೆ ವರ್ಗಾವಣೆ ಆದೇಶವನ್ನು ಮುಂದುವರಿಸಿತ್ತು. ಆದರೆ, ಜಯನಗರ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಇಲ್ಲದಿರುವ ಕಾರಣಕ್ಕೆ, ಡಾ. ರವಿ ಅವರಿಗೆ ಬೆಂಗಳೂರು ವಿವಿ ನೀಡಿದ್ದ ಸಂಶೋಧನ ಮಾರ್ಗದರ್ಶಕರ ಸ್ಥಾನ ಕೈತಪ್ಪುವ ಬಗ್ಗೆ ಇಂದು ನಡೆದ ಸಭೆಯಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.
ನ್ಯಾಷನಲ್ ಕಾಲೇಜು ಆಡಳಿತ ಮಂಡಳಿ ಜತೆಗೆ ನಡೆದ ಸಭೆಯಲ್ಲಿ ಪ್ರೊ. ಬಿ.ಸಿ. ಬಸವರಾಜು, ಶ್ರೀಪಾದ್ ಭಟ್, ಹಿರಿಯ ವಕೀಲರಾದ ಡಾ. ಸಿ.ಎಸ್. ದ್ವಾರಕನಾಥ್, ಬಂಜಗೆರೆ ಜಯಪ್ರಕಾಶ್, ಮಾವಳ್ಳಿ ಶಂಕರ್ ಅವರು ಆಡಳಿತ ಮಂಡಳಿಯಿಂದ ರವಿ ಬಾಗಿ ಅವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮತ್ತೊಮ್ಮೆ ವಿವರವಾಗಿ ಮನವರಿಕೆ ಮಾಡಿಕೊಟ್ಟರು. ಅಂತಿಮವಾಗಿ ನ್ಯಾಷನಲ್ ಕಾಲೇಜು ಆಡಳಿತ ಮಂಡಳಿಯು ತನ್ನ ನಿರ್ಧಾರವನ್ನು ವಾಪಸ್ ಪಡೆಯುವುದಾಗಿ ಹೇಳಿದೆ.