ಬಳ್ಳಾರಿ: ಜಿಲ್ಲೆಯಲ್ಲಿ ಕುರುಗೋಡು ತಾಲೂಕಿನ ಯರ್ರಂಗಳಿ, ಸಿದ್ದಮ್ಮನಹಳ್ಳಿ, ಏಳುಬೆಂಚಿ, ಬಾದನಹಟ್ಟಿ, ಸಿಂದಿಗೇರಿ, ದಮ್ಮೂರು, ಕೋಳೂರು ಗ್ರಾಮ ಪಂಚಾಯಿತಿಗಳ ಮಾರ್ಗವಾಗಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸಂಚಾರದ ವೇಳೆ ಸಂವಿಧಾನದ ಆಶಯ ಮತ್ತು ಮೌಲ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನ ಕುರಿತ ವಿಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರಸ್ತುತಪಡಿಸಲಾಯಿತು. ಸಾಂವಿಧಾನಿಕ ಪ್ರಸ್ತಾವನೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮೂಲಕ ಸಾಂವಿಧಾನಿಕ ಪ್ರಸ್ತಾವನೆ ಪ್ರತಿಗಳನ್ನು ರ್ಯಾಲಿಯ ಉದ್ದಕ್ಕೂ ವಿತರಿಸಲಾಯಿತು.
ರ್‍ಯಾಲಿಯನ್ನು ಪೂರ್ಣಕುಂಭ ಹೊತ್ತ ಮಹಿಳೆಯರು, ಮುಖಂಡರ ವೇಷಧಾರಿ ವಿದ್ಯಾರ್ಥಿಗಳು, ಡೊಳ್ಳು ಕುಣಿತ ಕಲಾವಿದರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಗ್ರಾಮ ಪ್ರತಿನಿಧಿಗಳು, ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ರಥೋತ್ಸವಕ್ಕೆ ಸ್ವಾಗತ ಕೋರಿದರು.
ಸಿದ್ದಮ್ಮನಹಳ್ಳಿ: ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥ ಸುಂಕಪ್ಪ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ನಮ್ಮ ಸಂವಿಧಾನವು ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದ್ದು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಆಡಳಿತ ವ್ಯವಸ್ಥೆಯು ಉತ್ತಮವಾಗಿ ನಡೆಯಲು ಕಾರಣವಾಗಿದೆ.
ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ, ಗ್ರಾ.ಪಂ.ಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಿದ್ದರು.



