ಚಂಡೀಗಢ: ರೋಹ್ಟಕ್‌ನ ಕುಸ್ತಿ ಅಖಾಡವೊಂದರಲ್ಲಿ ದಂಪತಿಗಳು ಹಾಗೂ ಅವರ ಮೂರು ವರ್ಷದ ಪುತ್ರ ಸೇರಿದಂತೆ ಒಟ್ಟು ಆರು ಮಂದಿಯನ್ನು ಬರ್ಬರವಾಗಿ ಹತ್ಯೆಗೈದಿದ್ದ ೩೪ ವರ್ಷದ ಮಾಜಿ ಕುಸ್ತಿ ತರಬೇತುದಾರನೊಬ್ಬನಿಗೆ ರೋಹ್ಟಕ್‌ನ ನ್ಯಾಯಾಲಯವೊಂದು ಮರಣ ದಂಡನೆ ವಿಧಿಸಿದೆ.
೧೭ ವರ್ಷದ ಮಹಿಳಾ ಕುಸ್ತಿಪಟುವೊಬ್ಬರು ನೀಡಿದ ದೂರನ್ನು ಆಧರಿಸಿ ತರಬೇತುದಾರ ಹುದ್ದೆಯಿಂದ ವಜಾಗೊಂಡು, ಕಾಲೇಜಿನ ಆವರಣದಲ್ಲಿರುವ ಜಿಮ್ನಾಷಿಯಂ ಪ್ರವೇಶಕ್ಕೆ ನಿಷೇಧ ಹೇರಲ್ಪಟ್ಟಿದ್ದ ಆರೋಪಿ ಸುಖ್ವಿಂದರ್ ಸಿಂಗ್, ಫೆಬ್ರವರಿ ೧೨, ೨೦೨೧ರಂದು ಹತ್ಯೆಗಳನ್ನು ನಡೆಸಿದ್ದ. ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿ ಸುಖ್ವಿಂದರ್ ಸಿಂಗ್‌ಗೆ ಮರಣ ದಂಡನೆ ವಿಧಿಸಿದ್ದು, ರೂ. ೧.೨೬ ಲಕ್ಷ ದಂಡವನ್ನೂ ಹೇರಿದೆ. ಆತನನ್ನು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲೂ ದೋಷಿ ಎಂದು ಘೋಷಿಸಲಾಗಿದೆ.