ನವದೆಹಲಿ : ಮದ್ಯದ ದೊರೆಯಾಗಿದ್ದ ದಿವಂಗತ ಪೋಂಟಿ ಚಡ್ಢ ಅವರಿಗೆ ಸೇರಿದ ಫಾರ್ಮ್ ಹೌಸ್‌ವೊಂದನ್ನು ಡೆಲ್ಲಿ ಅಭಿವೃದ್ಧಿ ಪ್ರಾಧಿಕಾರ ಕೆಡವಿ ಹಾಕಿದೆ.
ಈ ಬೃಹತ್ ಬಂಗಲೆಯನ್ನು ಕೆಡವಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರ್ಕಾರಿ ಜಾಗದಲ್ಲಿ ಕಟ್ಟಲಾದ ಅನಧಿಕೃತ ಕಟ್ಟಡಗಳ ತೆರವು, ಮತ್ತು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಯೋಜನೆಯ ಭಾಗವಾಗಿ ಈ ಕಾರ್ಯಾಚರಣೆ ನಡೆದಿದೆ. ಪೋಂಟಿ ಚಡ್ಢ ಅವರ ಫಾರ್ಮ್ ಹೌಸ್ ಅನ್ನು ಸರ್ಕಾರಿ ಜಾಗದಲ್ಲಿ ಕಟ್ಟಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ಕೆಡವಲಾಗಿದೆ.
ಲಿಕ್ಕರೆ ದೊರೆ ಎನಿಸಿರುವ ಗುರದೀಪ್ ಸಿಂಗ್ ಅಲಿಯಾಸ್ ಪೋಂಟಿ ಚಡ್ಢ ಅವರ ಈ ಫಾರ್ಮ್ ಹೌಸ್ ೧೦ ಎಕರೆಯಷ್ಟು ವಿಶಾಲ ಜಾಗದಲ್ಲಿ ಇದೆ. ಛತ್ತರ್‌ಪುರ್‌ನಲ್ಲಿರುವ ಇದರ ಮೌಲ್ಯ ಅಂದಾಜು ೪೦೦ ಕೋಟಿ ರೂ ಎನ್ನಲಾಗಿದೆ.
ಅಧಿಕಾರಿಗಳು ಐದು ಎಕರೆಯಷ್ಟು ಜಾಗವನ್ನು ವಶಕ್ಕೆ ಪಡೆದಿದ್ದರು. ಫಾರ್ಮ್‌ಹೌಸ್‌ನ ಮುಖ್ಯ ಕಟ್ಟಡವನ್ನು ಕೆಡವಲಾಗಿದೆ. ಅಷ್ಟೂ ಜಾಗವನ್ನು ಡಿಡಿಎ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿದೆ. ಎರಡು ತಿಂಗಳ ಹಿಂದೆಯೂ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಿತ್ತು. ಗೋಕುಲಪುರಿಯಲ್ಲಿ ಕಮರ್ಷಿಯಲ್ ಶೂರೂಮ್ ಸೇರಿದಂತೆ ಹಲವು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರನೆ ಜನವರಿ ೧೩ರಿಂದ ೧೭ರವರೆಗೂ ನಡೆದಿತ್ತು. ಒಟ್ಟು ನಾಲ್ಕು ಎಕರೆ ಸರ್ಕಾರಿ ಜಾಗವನ್ನು ಮರಳಿ ಸುಪರ್ದಿಗೆ ಪಡೆಯಲಾಗಿತ್ತು.