ಮೈಸೂರು: ವಿಶ್ವ ಸ್ಥೂಲಕಾಯ ದಿನದ ಅಂಗವಾಗಿ ಮೈಸೂರು ಅಡೋಲೆಸೆಂಟ್ ಹೆಲ್ತ್ ಅಕಾಡೆಮಿಯಿಂದ (MAHA) ವಿಜಯ ವಿಠಲ ವಿದ್ಯಾಶಾಲೆಯಲ್ಲಿ ಹದಿಹರೆಯದವರ ವಯಸ್ಸಿನಲ್ಲಿ ಬೊಜ್ಜು ವಿಷಯದಡಿಯಲ್ಲಿ ೮ ಮತ್ತು ೯ನೇ ತರಗತಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ಯು.ಜಿ.ಶೆಣೈರವರು,ಎಂ.ಬಿ.ಬಿ.ಎಸ್.ಡಿ.ಸಿ.ಹೆಚ್(DCH), ಮಕ್ಕಳ ತಜ್ಞರು,MAHA ಸಂಸ್ಥೆಯ ಅಧ್ಯಕ್ಷರು,ಇವರು ಮಾತನಾಡುತ್ತಾ, ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪ್ರಾಮುಖ್ಯತೆ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ಹದಿಹರೆಯದಲ್ಲಿ ಸ್ಥೂಲಕಾಯತೆಯನ್ನು ಎದುರಿಸಲು ಬೇಕಾದ ಅಮೂಲ್ಯವಾದ ವಿಚಾರಗಳನ್ನು ಮಕ್ಕಳ ಜೊತೆ ಹಂಚಿಕೊಂಡರು.ಹದಿಹರೆಯರಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು, ಅದರ ಪರಿಣಾಮಗಳ ಬಗ್ಗೆ ತಿಳಿಸಿದರು.ಈ ವಯಸ್ಸಿನಲ್ಲಿ ಎದುರಾಗುವ ಕೆಲವು ಸಮಸ್ಯೆಗಳಾದ ದೇಹದಾರ್ಢ್ಯ ಪರಿಕಲ್ಪನೆ, ಗೆಳೆಯರ ಒತ್ತಡ,ಆಹಾರ ಪದ್ಧತಿ,ಅತಿಯಾಗಿ ತಿನ್ನುವುದು, ಪೋಷಕರ ಮಕ್ಕಳ ಸಂಘರ್ಷ ಮುಂತಾದ ವಿಚಾರಗಳ ಬಗ್ಗೆ ವಿವರಿಸಿದರು .ಮಕ್ಕಳು ಈ ವಿಷಯದ ಬಗ್ಗೆ ಪೋಷಕರು, ಶಿಕ್ಷಕರು ಮತ್ತು ಹಿರಿಯರೊಂದಿಗೆ ಮುಕ್ತವಾಗಿ ಮಾತನಾಡುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಮಕ್ಕಳಲ್ಲಿ ಅರಿವು ಮೂಡಿಸಿದರು.ಯಾವುದೇ ಒಳ್ಳೆಯದು, ಕೆಟ್ಟದನ್ನು ಮಾಡುವ ಮುಂಚೆ ಯೋಚಿಸಿ ಎಂದರು.
ಡಾ.ತೃಪ್ತಿ,ಎಂ.ಬಿ.ಬಿ.ಎಸ್,ಅಂತ:ಸ್ರಾವ ಶಾಸ್ತ್ರಜ್ಞೆ (Endocrinologist),MAHA ಸಂಸ್ಥೆಯ ಸದಸ್ಯೆ,ಇವರು ಮಾತನಾಡುತ್ತಾ, ಮಕ್ಕಳ ದೇಹದ ಅತಿಯಾದ ತೂಕ ಉಂಟಾಗಲು ಆಲಸ್ಯ, ಪೌಷ್ಠಿಕಾಂಶ ಕಡಿಮೆಯುಳ್ಳ ಆಹಾರ (Junk food) ಗಳನ್ನು ತಿನ್ನುವುದು ಕಾರಣ ಎಂದು ತಿಳಿಸಿದರು.ಮಕ್ಕಳು ಆಲಸ್ಯದಿಂದ ಇದ್ದಾಗ, ದೈಹಿಕವಾಗಿ ವ್ಯಾಯಾಮಗಳಲ್ಲಿ ತೊಡಗುವಿಕೆ ಇಲ್ಲದಿದ್ದಾಗ ಕೊಬ್ಬಿನಾಂಶ ದೇಹದಲ್ಲಿ ಹೆಚ್ಚುತ್ತದೆ.ಸಸ್ಯ ಆಹಾರ,ಹಣ್ಣುಗಳನ್ನು ತಿನ್ನುವುದರಿಂದ,ದೈಹಿಕ ವ್ಯಾಯಾಮ ಮಾಡುವುದರಿಂದ,ಮೊಬೈಲ್ ಬಳಕೆ ಕಡಿಮೆ ಮಾಡುವುದರಿಂದ ಕೊಬ್ಬಿನಾಂಶ ತಡೆಯಬಹುದು ಎಂಬುದನ್ನು ತಿಳಿಸಿದರು.ಸ್ಥೂಲಕಾಯತೆಯು ಮುಂದಿನ ವಯಸ್ಸಿನಲ್ಲಿ ಮಕ್ಕಳಿಗೆ ಉಂಟು ಮಾಡಬಹುದಾದ ವಿವಿಧ ತೊಡಕುಗಳ ಬಗ್ಗೆ ಹಾಗೂ ಇದರಿಂದ ಜೀವನದ ಗುಣಮಟ್ಟ ಕಡಿಮೆಯಾಗುತ್ತದೆ ಎಂಬ ವಿಚಾರಗಳ ಬಗ್ಗೆ ತಿಳಿಸಿದರು. ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗುತ್ತದೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಕಾರ್ಯಕ್ಷಮತೆಯು ಬಹುಪಟ್ಟು ಹೆಚ್ಚಾಗುತ್ತದೆ ಎಂದು ಹೇಳುವ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಡಾ.ಮಾನಿನಿ,ಒಂಊಂ ಸಂಸ್ಥೆಯ ಕಾರ್ಯದರ್ಶಿ,ಡಾ.ಕನ್ಯಾ,MAHA ಸಂಸ್ಥೆಯ ಖಜಾಂಚಿ, ವೀಣಾ.ಎಸ್. ಎ.ಪ್ರಾಂಶುಪಾಲರು, ವಿಜಯ ವಿಠಲ ವಿದ್ಯಾಶಾಲೆ, ವಿವಿಧ ವಿಭಾಗದ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.