ಮಂಗಳೂರು(ದಕ್ಷಿಣ ಕನ್ನಡ): ರಾಜ್ಯ ಸರಕಾರವು ಈಗಾಗಲೇ ಮನೆಯೊಡತಿಗೆ ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ಪೂರಕವಾಗಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಾ. 8ರಂದು ಗೃಹಲಕ್ಷ್ಮಿ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ‘ಮಹಿಳಾ ಆರ್ಥಿಕ ಸಬಲಕೀರಣದ ಒಂದು ಹೆಜ್ಜೆ’ ಎಂಬ ಶೀರ್ಷಿಕೆಯೊಂದಿಗೆ ಗೃಹಿಣಿಯರ ಗೃಹ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಉಚಿತ ವ್ಯವಸ್ಥೆಯನ್ನು ಮಹಿಳಾ ಕಾಂಗ್ರೆಸ್ ವತಿಯಿಂದ ನಡೆಸಲಾಗುತ್ತಿದೆ ಎಂದರು.
ಕಡಬದಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲಿನ ಆ್ಯಸಿಡ್ ದಾಳಿಯನ್ನು ತೀವ್ರವಾಗಿ ಖಂಡಿಸಿದ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಸಂತ್ರಸ್ತ ವಿದ್ಯಾರ್ಥಿನಿಯರನ್ನು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ. ದಾಳಿಯ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ರಾಜ್ಯ ಸರಕಾರದಿಂದ ಸಿಗಬೇಕಾದ ಪರಿಹಾರ, ಚಿಕಿತ್ಸಾ ವ್ಯವಸ್ಥೆಗೆ ಎಲ್ಲಾ ರೀತಿಯ ಕ್ರಮ ವಹಿಸಲಾಗಿದೆ. ಇಂತಹ ಘಟನೆಗಳು ಪೋಷಕರಿಗೂ ಎಚ್ಚರಿಕೆಯಾಗಿದ್ದು, ತಮ್ಮ ಮಕ್ಕಳ ಬಗ್ಗೆ ಕಾಳಜಿಯ ಜತೆ ನಿಗಾ ವಹಿಸಬೇಕಾದ ಅಗತ್ಯವಿದೆ. ಮಹಿಳಾ ಘಟಕದ ವತಿಯಿಂದ ಶೀಘ್ರವೇ ಪೋಷಕರಿಗೆ ಈ ನಿಟ್ಟಿನಲ್ಲಿ ಜಾಗೃತಿ ರೂಪದ ವಿಚಾರ ಸಂಕಿರಣ ನಡೆಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದು ಹೇಳಿದರು.