ದಾವಣಗೆರೆ; ದಾವಣಗೆರೆ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಲವು ಆಧುನಿಕ ಸೌಕರ್ಯಗಳನ್ನು ಹೊಂದಿದ್ದು ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ಗಳ ಜೊತೆಗೆ ಪ್ರಯಾಣಿಕರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ರಾಜ್ಯದಲ್ಲಿನ ಮೊದಲ ಬಸ್ ನಿಲ್ದಾಣ ಇದಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿಯವರು ತಿಳಿಸಿದರು.
ಅವರು ಶನಿವಾರ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣ ಮಾಡಲಾಗಿರುವ ದಾವಣಗೆರೆ ಮುಖ್ಯ ಬಸ್ ನಿಲ್ದಾಣ ಹಾಗೂ ಬೇತೂರು ರಸ್ತೆಯಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಲೋಕಾರ್ಪಣೆ ಮಾಡಿ ಮುಖ್ಯ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಮಾತನಾಡಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಮುಖ್ಯ ಬಸ್ ನಿಲ್ದಾಣ ಮತ್ತು ಬೇತೂರು ರಸ್ತೆಯ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಮುಖ್ಯ ಬಸ್ ನಿಲ್ದಾಣವನ್ನು ಶೇ 109.84 ಕೋಟಿಯಲ್ಲಿ 6.07 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಶೇ 25 ರಷ್ಟು ನಿಗಮದ ಅನುದಾನ ಹಾಗೂ ಶೇ 75 ರಷ್ಟು ಸ್ಮಾರ್ಟ್ ಸಿಟಿ ಯೋಜನೆ ಅನುದಾನವಾಗಿದೆ. ಮತ್ತು ಬೇತೂರು ರಸ್ತೆಯಲ್ಲಿನ ಬಸ್ ನಿಲ್ದಾಣವನ್ನು 1.20 ಎಕರೆ ಜಾಗದಲ್ಲಿ ರೂ.8.96 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ದಾವಣಗೆರೆಯಿಂದ ಪ್ರತಿನಿತ್ಯ 1400 ಕ್ಕಿಂತ ಹೆಚ್ಚು ಬಸ್ಗಳು ಬಂದು ಹೋಗುತ್ತವೆ. ಇಲ್ಲಿಗೆ ಆಗಮಿಸುವ ಬಸ್ಗಳ ಸಂಖ್ಯೆಯು ಹೆಚ್ಚಿದ್ದು ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಶಕ್ತಿ ತಂದ ಮೇಲೆ ಮಹಿಳೆಯರಿಗೆ ಶಕ್ತಿ; ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಸರ್ಕಾರ ಬಂದು 15 ದಿನಗಳಲ್ಲಿ ಮಹಿಳೆಯರು ಉಚಿತ ಪ್ರಯಾಣಿಸುವ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆ ಜಾರಿಯಿಂದ ಮುಂದಿನ ದಿನಗಳಲ್ಲಿ ನಿಗಮದ ಬಸ್ಗಳಿಗೆ ಇಂಧನ ಭರಿಸಲು ಹಣವಿಲ್ಲದಂತಾಗುತ್ತದೆ ಎಂಬ ಭಾವನೆಯನ್ನು ನಿವಾರಣೆ ಮಾಡಿ ನಿಗಮವನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಶಕ್ತಿ ಬಂದಾಗಿನಿಂದ ರಾಜ್ಯದಲ್ಲಿ 160 ಕೋಟಿಗಿಂತಲೂ ಹೆಚ್ಚಿನ ಮಹಿಳೆಯರು ಪ್ರಯಾಣಿಸಿದ್ದು ಇವರಿಗೆ ಆರ್ಥಿಕವಾಗಿ ಶಕ್ತಿ ತುಂಬಲಾಗಿದೆ.
ಸಿಬ್ಬಂದಿ ನೇಮಕ, ಹೊಸ ಬಸ್ಗಳ ಖರೀದಿ; ವಿವಿಧ ಸಾರಿಗೆ ನಿಗಮಗಳಿಗೆ ಸುಮಾರು 5800 ಹೊಸ ಬಸ್ಗಳನ್ನು ಖರೀದಿ ಮಾಡಲಾಗುತ್ತಿದ್ದು ಈಗಾಗಲೇ ಅರ್ಧಕ್ಕೂ ಹೆಚ್ಚು ಹೊಸ ಬಸ್ಗಳು ಬಂದಿವೆ. ಉಳಿದ ಅರ್ಧ ಬಸ್ಗಳು ಬರಬೇಕಾಗಿದೆ. 2016 ರಿಂದ ಸಾರಿಗೆ ನಿಗಮದ ಸಿಬ್ಬಂದಿಗಳ ನೇಮಕಾತಿ ನಡೆಯದ ಕಾರಣ ಹೊಸ ಬಸ್ ಖರೀದಿಸಿದರೂ ಸಿಬ್ಬಂದಿ ಕೊರತೆಯಾಗುತ್ತಿತ್ತು. ಇದನ್ನು ಮನಗಂಡು 9 ಸಾವಿರ ನಿಗಮದ ಸಿಬ್ಬಂದಿಗಳನ್ನು ನೇಮಕಾತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 1619 ಸಿಬ್ಬಂದಿಗಳಿಗೆ ಕಲ್ಯಾಣ ಕರ್ನಾಟಕ ವಲಯಕ್ಕೆ ನೇಮಕಾತಿ ಆದೇಶ ನೀಡಲಾಗಿದೆ. ಖಾಲಿ ಇರುವ ಸಿಬ್ಬಂದಿಗಳ ನೇಮಕಾತಿ ಮಾಡಿದ ತಕ್ಷಣವೇ ಕೊರೋನಾ ಸಂದರ್ಭದಲ್ಲಿ ನಿಲ್ಲಿಸಲಾಗಿದ್ದ ಹಳೆ ಮಾರ್ಗ ಮತ್ತು ಪ್ರಯಾಣಿಕರ ದಟ್ಟಣೆ ಇರುವ ಹೊಸ ಮಾರ್ಗಗಳಲ್ಲಿ ಬಸ್ ಓಡಿಸಲಾಗುತ್ತದೆ ಎಂದರು.
ಪಂಪಾಪತಿ ಹೆಸರು ಪರಿಶೀಲನೆ; ದಾವಣಗೆರೆ ಬಸ್ ನಿಲ್ದಾಣಕ್ಕಾಗಿ ಶ್ರಮಿಸಿದ ಮಾಜಿ ಶಾಸಕರಾದ ಪಂಪಾಪತಿಯವರ ಹೆಸರಿಡಬೇಕೆಂದು ಬೇಡಿಕೆ ಇದ್ದು ಈ ಬಗ್ಗೆ ನಿಗಮದ ಆಡಳಿತ ಮಂಡಳಿಯಲ್ಲಿ ನಿರ್ಧರಿಸಬೇಕಾಗಿದೆ. ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
