ಮೈಸೂರು : ಪಾಲಿಕೆ ಮಾಜಿ ಸದಸ್ಯ ಅಯಾಜ್ ಪಂಡು ಸಹೋದರ ಮುಸ್ಲಿಂ ಧರ್ಮಗುರು ಮೊಹಮ್ಮದ್ ಅಕ್ಮಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ಡ್ ನಂ. ೩೩ ರ ಮಾಜಿ ಸದಸ್ಯ ಬಶೀರ್ ಅಹಮದ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಷೀರ್ ಅಹಮದ್, ಇಬ್ರಾಹಿಂ, ಪರ್ವೀಜ್ ಬೇಗ್ ಹಾಗೂ ಮಹಮದ್ ಇಲಿಯಾಸ್ ಬಂಧಿತರು. ನಾಲ್ವರು ಆರೋಪಿಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ೭ ದಿನಗಳ ಅವಧಿಗೆ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದೆ. ಮಾರ್ಚ್ ೮ ರಂದು ಮಹಮದ್ ಅಕ್ಮಲ್ ರನ್ನು ರಾಜೀವ್ ನಗರದ ಆರ್ಯ ಬೇಕರಿ ಬಳಿ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದರು. ಈ ಸಂಭಂದ ಅಕ್ಮಲ್ ಅವರ ಪತ್ನಿ ನಾಜಿಯಾ ಉದಯಗಿರಿ ಪೊಲೀಸ್ ಠಾಣೆಯಲ್ಲಿ ವಾರ್ಡ್ ನಂ.೩೩ ರ ಕಾರ್ಪೊರೇಟರ್ ಆಗಿದ್ದ ಬಷೀರ್ ಅಹಮದ್, ಈತನ ಪುತ್ರ ಫೈಜಾನ್ ಅಹಮದ್, ಕೆಎಂಡಿಸಿ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್, ಪರ್ವೀಜ್, ಇಬ್ರಾಹಿಂ ಇತರರ ಮೇಲೆ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನ ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು.