ಮುಂಬೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾವು (ಬಿಒಐ) ಹೊಸ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇ ೮.೪೫ರಿಂದ ಶೇ ೮.೩ಕ್ಕೆ ಇಳಿಸಿದೆ.
ಅಲ್ಲದೆ, ಸಾಲ ಮಂಜೂರಾತಿಯ ಸಂಸ್ಕರಣಾ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ದೊರೆಯಲಿದೆ. ಈ ತಿಂಗಳ ಅಂತ್ಯದವರೆಗಷ್ಟೇ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. ೩೦ ವರ್ಷದ ಅವಧಿಯ ಸಾಲಕ್ಕೆ ಇಎಂಐ ೭೫೫ ಆಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರ ಶೇ ೮.೪ರಷ್ಟಿದೆ. ಇವುಗಳಿಗೆ ಹೋಲಿಸಿದರೆ ನಮ್ಮಲ್ಲಿ ಬಡ್ಡಿದರ ತೀರಾ ಕಡಿಮೆ ಇದೆ ಎಂದು ತಿಳಿಸಿದೆ. ಈ ಸಾಲದ ಜೊತೆಗೆ ಹೊಸ ಮನೆಯ ತಾರಸಿ ಮೇಲೆ ಸೌರ ಫಲಕಗಳ ಅಳವಡಿಕೆಗೆ ಶೇ ೭ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಇದಕ್ಕೂ ಸಂಸ್ಕರಣಾ ಶುಲ್ಕವಿಲ್ಲ ಎಂದು ತಿಳಿಸಿದೆ.
ಸಾಲದ ಮೊತ್ತದ ಶೇ ೯೫ರಷ್ಟು ಹಣ ಮಂಜೂರು ಮಾಡಲಾಗುವುದು. ಮರುಪಾವತಿ ಅವಧಿಯನ್ನು ೧೨೦ ತಿಂಗಳಿಗೆ ನಿಗದಿಪಡಿಸಲಾಗಿದೆ.
ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯಡಿ ಲಭಿಸಿರುವ ೭೮ ಸಾವಿರ ಸಬ್ಸಿಡಿ ಸೌಲಭ್ಯವನ್ನೂ ಪಡೆಯಬಹುದಾಗಿದೆ ಎಂದು ತಿಳಿಸಿದೆ.