Wednesday, May 21, 2025
Google search engine

Homeಅಪರಾಧಹಲ್ಲೆ : ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿದ ಪೊಲೀಸರು!

ಹಲ್ಲೆ : ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿದ ಪೊಲೀಸರು!

ಬೆಂಗಳೂರು: ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಕಗ್ಗಲೀಪುರ ಪೊಲೀಸರು ೫೦ ವರ್ಷದ ಕೊಲೆ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಜೆ.ಪಿ.ನಗರ ೧ನೇ ಹಂತದ ಸಾರಕ್ಕಿ ನಿವಾಸಿ ಎಸ್.ಸೋಮೇಶ ಬಂಧಿತ ಆರೋಪಿ. ಈತ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ತನ್ನ ಆತ್ಮೀಯ ಸ್ನೇಹಿತನನ್ನು ಕೊಂದು ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಸೋಮೇಶನನ್ನು ಖಚಿತ ಮಾಹಿತಿಯ ಮೇರೆಗೆ ಉತ್ತರ ಪ್ರದೇಶದ ಲಖನೌದಲ್ಲಿ ಬಂಧಿಸಿದ ಪೊಲೀಸರು, ಶನಿವಾರ ಮುಂಜಾನೆ ಕಗ್ಗಲಿಪುರ ಠಾಣೆಗೆ ಕರೆತಂದಿದ್ದಾರೆ. ಬಂಧನದ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಕೊಲೆ ಮಾಡಲು ಬಳಸಿದ ಆಯುಧ ಮತ್ತು ಮೃತದೇಹವನ್ನು ಎಸೆದಿದ್ದ ಸ್ಥಳದ ಮಹಜರಿಗಾಗಿ ಆತನನನ್ನು ಕರೆದೊಯ್ಯಲಾಗಿದೆ.

ಶನಿವಾರ ಮಧ್ಯಾಹ್ನ ಬೆಂಗಳೂರು ದಕ್ಷಿಣದ ಉತ್ತರಹಳ್ಳಿಯ ಸ್ಮಶಾನ ರಸ್ತೆಗೆ ಕರೆದೊಯ್ಯಿದಾಗ, ತಪ್ಪಿಸಿಕೊಳ್ಳುವ ಉದ್ದೇಶದಿಂದ ಹೆಡ್ ಕಾನ್‌ಸ್ಟೆಬಲ್ ಮೇದಪ್ಪ (೪೦) ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಆರೋಪಿ ಎಡಗಾಲಿಗೆ ಗುಂಡು ಹಾರಿಸಿದ್ದು, ಶಸ್ತ್ರ ಚಿಕಿತ್ಸೆಗಾಗಿ ಕಗ್ಗಲೀಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಹೋಟೆಲ್ ಉದ್ಯಮಿಯಾಗಿದ್ದು, ಇತರ ನಾಲ್ಕು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾಗಿದೆ. “ಕಳೆದ ವರ್ಷ ಡಿಸೆಂಬರ್ ೫ರಂದು ಅಂಜನಾಪುರ ಹಾಗೂ ಮುಂಬೈನಲ್ಲಿ ಹೊಟೇಲ್ ಆರಂಭಿಸುವುದಾಗಿ ಸೋಮೇಶನಿಂದ ಹಣ ಪಡೆದು ವಾಪಸ್ ಕೊಡದಿದ್ದ ತನ್ನ ಸ್ನೇಹಿತ ಅಯ್ಯಪ್ಪನ್ ಚಿಲ್ಲದೊರೈ ತೇವರ್ ಎಂಬಾತನನ್ನು ಆರೋಪಿ ಹತ್ಯೆ ಮಾಡಿದ್ದ. ವ್ಯವಹಾರದಲ್ಲಿ ನಷ್ಟ ಉಂಟಾಗಿ ತೇವರ್ ಹಣ ವಾಪಸ್ ಕೊಡಡೆ ಮತ್ತೆ ಹಣ ಕೇಳಿದ್ದರಿಂದ ಹತಾಶೆಗೊಂಡ ಸೋಮೇಶ್ ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿ ಕೇಬಲ್ ವೈರ್ ನಿಂದ ತೇವರಿ ಕತ್ತು ಹಿಸುಕಿ ಕೊಲೆಗೈದಿದ್ದರು. ಬಳಿಕ ಆರೋಪಿಗಳು ಶವ ಮತ್ತು ಆಯುಧವನ್ನು ಕಗ್ಗಲೀಪುರದ ನೀಲಿಗಿರಿ ತೋಪಿನಲ್ಲಿ ಎಸೆದಿದ್ದರು. ನಂತರ ಹುಬ್ಬಳ್ಳಿಗೆ ತೆರಳಿದ ಸೋಮೇಶ, ಕೊಲೆ ಮಾಡಿದಾಗ ಧರಿಸಿದ್ದ ಬಟ್ಟೆಯನ್ನು ಸುಟ್ಟು ಹಾಕಿದ್ದ ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದರು. ಆರೋಪಿಗಳ ವಿರುದ್ಧ ಕೊಲೆ ಯತ್ನ (ಐಪಿಸಿ ೩೦೭) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

RELATED ARTICLES
- Advertisment -
Google search engine

Most Popular