ರಂಗಾರೆಡ್ಡಿ: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೈಸೂರು ಮೂಲದ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿಯಂತ್ರಣ ತಪ್ಪಿದ ಮಾರುತಿ ಇಕೋ ವ್ಯಾನ್ ಮರಕ್ಕೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರವಾಗಿ ಗಾಯಗೊಂಡ ಇತರ ನಾಲ್ವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಮೃತಪಟ್ಟವರನ್ನು ಮೈಸೂರು ಮೂಲದವರು ಎಂದು ಪೊಲೀಸರು ಗುರುತಿಸಿದ್ದಾರೆ. ಈ ಪೈಕಿ ಕೇಟರಿಂಗ್ ಉದ್ಯಮ ನಡೆಸುತ್ತಿರುವ ಎಸ್.ಕೆ. ರತ್ನಾಕರ್ (೬೬) ಹಾಗೂ ಸಾಫ್ಟ್‌ವೇರ್ ಎಂಜಿನಿಯರ್ ಡಿ.ಎನ್. ನರಸಿಂಹ ಅಯ್ಯರ್ (೪೭) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿ. ವಿಶ್ವನಾಥಂ, ಶ್ರೀರಾಮ್, ರಘುರಾಮ್ ಮತ್ತು ಮದನ್ ಕುಮಾರ್ ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಮದನ್ ಕುಮಾರ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರೆಲ್ಲರೂ ಮೈಸೂರಿನಿಂದ ವಾರಾಣಸಿಗೆ ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಗಾಯಾಳುಗಳನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.