Thursday, May 22, 2025
Google search engine

Homeಅಪರಾಧಕಾನೂನುಅಕ್ರಮ ಆಸ್ತಿ ಗಳಿಕೆ ಆರೋಪ: ರಾಜ್ಯದ 60 ಕಡೆ ಲೋಕಾಯುಕ್ತ ದಾಳಿ

ಅಕ್ರಮ ಆಸ್ತಿ ಗಳಿಕೆ ಆರೋಪ: ರಾಜ್ಯದ 60 ಕಡೆ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ರಾಜ್ಯದ 13 ಅಧಿಕಾರಿಗಳಿಗೆ ಸಂಬಂಧಪಟ್ಟ ಮನೆ, ಕಚೇರಿ ಸೇರಿದಂತೆ 60 ಕಡೆಗಳಲ್ಲಿ ದಾಳಿ ಮಾಡಿದ್ದಾರೆ.

ಬೆಂಗಳೂರು, ಉಡುಪಿ, ಕಾರವಾರ, ಮೈಸೂರು, ಕೊಡಗು, ಬೀದರ್, ಧಾರವಾಡ, ಕೋಲಾರ, ವಿಜಯಪುರ, ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. 

ರಾಜ್ಯದ ಅತಿ ಶ್ರೀಮಂತ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಪಡೆದಿರುವ ರಾಮನಗರ ತಾಲೂಕಿನ ಬಿಡದಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಯತೀಶ್ ಚಂದ್ರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಈಗಲ್ಟನ್ ರೆಸಾರ್ಟ್ ​​ನಲ್ಲಿ ಪಿಡಿಓ‌ ಯತೀಶ್​ ನನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಪಿಡಿಓ ಯತೀಶ್​ ಚಂದ್ರ ಅವರಿಗೆ ಸೇರಿದ ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದೆ.

ಪಿಡಿಒ ಯತೀಶ್​ ಚಂದ್ರ ಕಳೆದೆರಡು ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿದ್ದಾರೆ. ಯತೀಶ್ ಮೈಸೂರಿನಲ್ಲಿ ಪತ್ನಿ ಹೆಸರಿನಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಮನೆಗೆ ಐದು ಕೋಟಿಗೂ ಅಧಿಕ ಖರ್ಚು ಮಾಡುತ್ತಿದ್ದಾರೆ. ಯತೀಶ್​ ಮೈಸೂರಿನಲ್ಲಿ ಈಗಾಗಲೆ ಎರಡು ಮನೆ ಹೊಂದಿದ್ದಾರೆ.

ಇನ್ನು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಚೀಫ್ ಇಂಜಿನಿಯರ್ ರಂಗನಾಥ್ ಅವರಿಗೆ ಸೇರಿದ ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಉತ್ತರ ಕನ್ನಡ ಮತ್ತು ಬೀದರ್ ​ಜಿಲ್ಲೆಯ ಇಬ್ಬರು ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಆರ್. ರೇವಣಕರ್ ಅವರ ಕಾರವಾರದ ಐಶ್ವರ್ಯ ರೆಸಿಡೆನ್ಸಿಯಲ್​​ನಲ್ಲಿರುವ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಬೀದರ್​ ಜಿಲ್ಲೆಯಲ್ಲಿ ಭಾಲ್ಕಿ ಕಾರಂಜಾ ವಿಭಾಗದ ಎಲೆಕ್ಟ್ರಿಕಲ್ ಎಂಜಿನಿಯರ್​ ಶಿವಕುಮಾರ್​ ಸ್ವಾಮಿ ಅವರಿಗೆ ಸೇರಿದ ಬೀದರ್ ​ನ ಅಗ್ರಿಕಲ್ಚರ್ ಕಾಲೋನಿಯಲ್ಲಿರುವ ಮನೆ, ಕಲಬುರಗಿಯ ಎಂ.ಬಿ. ಕಾಲೋನಿಯಲ್ಲಿರುವ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಚನ್ನಪಟ್ಟಣ ತಾಲೂಕಿನ ಮೈಲನಾಯಕನ ಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಶೀಬಾ ಮನೆ ಮೇಲೂ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಪಿಡಿಒ ಶೀಬಾ ಕಳೆದ‌ ಒಂದು ತಿಂಗಳಿನಿಂದ ರಜೆಯಲ್ಲಿದ್ದಾರೆ.

ಚಿಕ್ಕಬಳ್ಳಾಫುರ ಕೆಆರ್​ಡಿಎಲ್​ ಅಧಿಕಾರಿ ಮನೆ, ಕಚೇರಿ ಮೇಲೆ ದಾಳಿ

ಚಿಕ್ಕಬಳ್ಳಾಫುರ ಕೆಆರ್​ ಡಿಎಲ್ ​ನ ಅಧಿಕಾರಿ ಸದಾಶಿವಯ್ಯ ಅವರಿಗೆ ಸೇರಿದ ನಾಲ್ಕು ಮನೆಗಳು ಹಾಗೂ ಚಿಕ್ಕಬಳ್ಳಾಫುರ ಕೆಆರ್​ ಡಿಎಲ್ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಮೈಸೂರಿನಲ್ಲಿ ಎರಡು ಮನೆಗಳು, ಟಿ. ನರಸಿಪುರದ ಮನೆ, ಬೆಂಗಳೂರಿನ ಯಲಹಂಕದಲ್ಲಿರುವ ಮನೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

ಆರ್​ ಟಿಓ ಅಧಿಕಾರಿಯ ನಿವಾಸದಲ್ಲಿ ಪರಿಶೀಲನೆ

ವಿಜಯಪುರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖಪ್ಪ ತೀರ್ಥ ಅವರ ವಿಜಯಪುರದ ‌ಚಾಲುಕ್ಯ ನಗರದಲ್ಲಿರುವ ನಿವಾಸ, ಜಮಖಂಡಿಯಲ್ಲಿರುವ ಮನೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.  ಅಲ್ಲದೆ ಷಣ್ಮುಖಪ್ಪ ಅವರ ಸಂಬಂಧಿಕರ ನಿವಾಸಗಳ ಮೇಲೂ ದಾಳಿ ಮಾಡಿದ್ದಾರೆ.

ಧಾರವಾಡ ಅರಣ್ಯ ಅಧಿಕಾರಿ ಮನೆ ಮೇಲೆ ದಾಳಿ

ಧಾರವಾಡದ ಮೂಕಾಂಬಿಕಾ ನಗರದಲ್ಲಿರುವ ಅರಣ್ಯ ಸಂಶೋಧನಾ ವಿಭಾಗದ ಆರ್‌ಎಫ್‌ಒ ಮಹೇಶ್ ಹಿರೇಮಠ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಧಾರವಾಡ ಲೋಕಾಯುಕ್ತ ಎಸ್ ​ಪಿ ಶಂಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

RELATED ARTICLES
- Advertisment -
Google search engine

Most Popular