ರಾಮನಗರ: ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ ಕೆ ಸುರೇಶ್ ಅವರು ನೂರಕ್ಕೆ ನೂರು ಈ ಬಾರಿಯೂ ಗೆಲ್ಲುತ್ತಾರೆ. ಪ್ರತಿನಿತ್ಯ ನನಗೆ ಮಾಹಿತಿ ಬರುತ್ತಿದೆ. ಈ ಆಧಾರದಲ್ಲಿ ಹೇಳುತ್ತೇನೆ. ಸುರೇಶ್ ಅವರು ಗೆಲುವು ಶತಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ ಕೆ ಸುರೇಶ್ ನಾಮಪತ್ರ ಸಲ್ಲಿಕೆ ಸಭೆ ಉದ್ದೇಶಿಸಿ ರಾಮನಗರದಲ್ಲಿ ಮಾತನಾಡಿದರು. ಡಿ ಕೆ ಸುರೇಶ್ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಜಿಲ್ಲೆಯ ಪ್ರಗತಿಗೆ ನಿರಂತರವಾಗಿ ದುಡಿಯುತ್ತಾರೆ. ಈ ಕಾರಣಕ್ಕೆ ಕಾಂಗ್ರೆಸ್ ಮತ್ತೆ ಇವರನ್ನು ಅಭ್ಯರ್ಥಿಯನ್ನಾಗಿಸಿದೆ. ಇವರನ್ನು ನಿಮ್ಮ ಪ್ರತಿನಿಧಿಯಾಗಿ ಗೆಲ್ಲಿಸಿ ದೆಹಲಿಗೆ ಕಳುಹಿಸಿದರೆ ಇವರು ನಮ್ಮ ದ್ವನಿಯಾಗಿ ಕೆಲಸ ಮಾಡುತ್ತಾರೆ ಎಂದರು.
ಸರ್ಕಾರ ಬಂದ ದಿನದಿಂದಲೇ ನಾವು ಕೊಟ್ಟ ಮಾತನ್ನು ಈಡೇರಿಸುವ ಕೆಲಸ ಶುರು ಮಾಡಿದೆವು. ಎಂಟೇ ತಿಂಗಳಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಜೆಪಿ ಇವತ್ತಿನವರೆಗೂ ಕೊಟ್ಟ ಮಾತಿನಲ್ಲಿ ಒಂದನ್ನೂ ಈಡೇರಿಸಿಲ್ಲ. ಹೀಗಾಗಿ ಬಿಜೆಪಿಗೆ ಮತ ಹಾಕಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿಕೊಳ್ಳಿ ಎಂದರು. ಹೀಗಾಗಿ ಜನರ ನಡುವೆ ನಿಂತು ಜನರ ದಿನನಿತ್ಯದ ಕಷ್ಟ ಸುಖಗಳಿಗೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೊ ಅಥವಾ ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ ಎನ್ನುವುದನ್ನು ಕ್ಷೇತ್ರದ ಮತದಾರರು ನಿರ್ಧರಿಸಿ ಆಗಿದೆ. ಡಿ.ಕೆ.ಸುರೇಶ್ ಅವರನ್ನು ಜನ ಗೆಲ್ಲಿಸಲು ತೀರ್ಮಾನಿಸಿ ಆಗಿದೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಎಂ.ಸಿ.ಸುಧಾಕರ್, ಮಂಕಾಳ ವೈದ್ಯ , ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ , ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್ ಸೇರಿ ರಾಮನಗರ ಜಿಲ್ಲೆಯ ಕಾಂಗ್ರೆಸ್ ಶಾಸಕರುಗಳು ಮತ್ತು ಜಿಲ್ಲಾ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.