ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಎಲ್ಲಾ ನರೇಗಾ ಕಾರ್ಮಿಕರು ಮೇ .7 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕಂಪ್ಲಿ ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಹಾಗೂ ತಾಪಂ ಇಒ ಶ್ರೀಕುಮಾರ್ ಮಾಹಿತಿ ನೀಡಿದರು.
ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯಿತಿ ಹಾಗೂ ತಾ.ಪಂ., ತಾಲೂಕು ಸ್ವೀಪ್ ಸಮಿತಿ ಕಂಪ್ಲಿ ಆಶ್ರಯದಲ್ಲಿ ಸೋಮವಾರ ತಾಲೂಕಿನ ಸಣಾಪುರ, ನೆಲ್ಲುಡಿ, ದೇವಲಾಪುರ ಗ್ರಾಮದ ಸುತ್ತಮುತ್ತಲಿನ ನರೇಗಾ ಕಾರ್ಯಕ್ಷೇತ್ರದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಹಬ್ಬಗಳಿದ್ದಂತೆ. ಮತದಾನದಲ್ಲಿ ತನ್ನದೇ ಆದ ವೈಶಿಷ್ಟ್ಯವಿದೆ. ಹಾಗಾಗಿ ಯಾರೂ ಮತದಾನ ಪ್ರಕ್ರಿಯೆಯಿಂದ ಹಿಂದೆ ಸರಿಯಬಾರದು. ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಮನವರಿಕೆ ಮಾಡಿದರು.
ಮತದಾರರನ್ನು ಸೆಳೆಯಲು ಎಲ್ಲಾ ಗ್ರಾಮ ಪಂಚಾಯಿತಿ ವಾರು ಗುಲಾಬಿ ಮತ್ತು ಪರಿಸರ ಸ್ನೇಹಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಯಾವುದೇ ಆಸೆಗೆ ಬೀಳದೆ ಎಲ್ಲರೂ ಮತದಾನ ಮಾಡಬೇಕು ಎಂದು ಮಾಹಿತಿ ನೀಡಿದರು. ಯುವ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಸುಭದ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ದಿನಗೂಲಿ ಹೆಚ್ಚಿಸಲಾಗಿದೆ, ಯಾರನ್ನೂ ನಿಂದಿಸಬಾರದು. ನಿಮ್ಮ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುವುದು.
ಈ ಸಂದರ್ಭದಲ್ಲಿ ಮತದಾರರ ಪ್ರಮಾಣ ವಚನ ಸ್ವೀಕಾರ ಮಾಡಲಾಯಿತು. ಈ ವೇಳೆ ತಾಲೂಕು ಐಇಸಿ ಸಂಯೋಜಕ ಹನುಮೇಶ, ಬಿಎಫ್‌ಟಿ ಬಾಷಾ, ಜಿಕೆಎಂ ಸಿರೀಶ, ನೆಲ್ಲುಡಿ ಗ್ರಾಪಂ ಸಹಾಯಕ ನಿರ್ದೇಶಕ ಮಲ್ಲನಗೌಡ, ದೇವಲಾಪುರ ಗ್ರಾಪಂ ಪಿಡಿಒ ಶಶಿಕಾಂತ ಸೇರಿದಂತೆ ಕೂಲಿಕಾರರು ಹಾಜರಿದ್ದರು.