ಬೆಂಗಳೂರ: ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ ರಾವ್ ಅವರು ಚಿಕಿತ್ಸೆ ಫಲಿಸದೇ ಇಂದು ಬುಧವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ ೭೫ ವರ್ಷ ವಯಸ್ಸಾಗಿತ್ತು.
ಮೂಲತಃ ಶಿರಸಿ ತಾಲ್ಲೂಕಿನವರಾದ ಎಂ.ಕೆ.ಭಾಸ್ಕರರಾವ್ ಅವರು ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ. ಪ್ರಜಾವಾಣಿ ಪತ್ರಿಕೆಯ ಸಹಾಯಕ ಸಂಪಾದರೂ ಆಗಿದ್ದರು. ಪ್ರಜಾವಾಣಿಯಿಂದ ನಿವೃತ್ತರಾದ ಬಳಿಕ ಅಂಕಣಕಾರರಾಗಿ ಕಾರ್ಯ ನಿರ್ವಹಿಸಿದ್ದರು.
ಪತ್ರಿಕೋದ್ಯಮದ ಜೊತೆಗೆ ಸಿನಿಮಾ, ಸಾಹಿತ್ಯ, ಸಂಗೀತ ಹೀಗೆ ಹಲವಾರು ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದಾರೆ. ದಿನೇಶ್ ಬಾಬು ನಿರ್ದೇಶನದ, ನಟ ಉಪೇಂದ್ರ ಅಭಿನಯದ ಹಾಲಿವುಡ್ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ನೀಡುವ ೨೦೧೮ರ ಸಾಲಿನ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಯು ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ ರಾವ್ ಅವರಿಗೆ ದೊರೆತಿದೆ. ಅಂತ್ಯಕ್ರಿಯೆ ಇಂದು ಸಂಜೆ ಬೆಂಗಳೂರಿನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.