ಕಾರವಾರ: ಬೊಮ್ಮಾಯಿ ಬದಲು ನನ್ನನ್ನು ಮುಖ್ಯಮಂತ್ರಿ ಮಾಡಿದ್ದರೆ ರಾಜ್ಯದಲ್ಲಿ ೧೦೩ ಸೀಟುಗಳನ್ನು ಗೆಲ್ಲಿಸುತ್ತಿದ್ದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕುಮಟಾದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ರಾಜಕಾರಣಿಗಳನ್ನು ಎಂದೂ ಮುಗಿಸಲು ಸಾಧ್ಯವಿಲ್ಲ. ಈಶ್ವರಪ್ಪನವರು ಹೇಳುವ ವಿಚಾರವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ನಾನು ವಿರೋಧ ಪಕ್ಷದ ನಾಯಕನಾಗುವ ಎಲ್ಲಾ ಅರ್ಹತೆ ಇತ್ತು. ನನ್ನನ್ನು ಮಾಡಲಿಲ್ಲ, ನನಗೆ ಅಸಮಾಧಾನ ಇಲ್ಲ. ಜೂನ್ ೪ರ ನಂತರ ಕುಟುಂಬ ರಾಜಕಾರಣದಿಂದ ಇಡೀ ದೇಶದಲ್ಲಿ ಬಿಜೆಪಿ ಮುಕ್ತವಾಗಲಿದೆ ಎಂದು ನನಗೆ ಹೈಕಮಾಂಡ್ ಭರವಸೆ ನೀಡಿದೆ. ಹಿಂದೂಪರ ಮಾತನಾಡುವವರಿಗೆ ಯಾವುದೇ ಅನ್ಯಾಯ ಆಗುವುದಿಲ್ಲ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಯಾವಾಗಲೋ ಆಗಬೇಕಿತ್ತು. ಸುಧಾಕರ್ ಹಿಂದೆ ಸಚಿವರಾಗಿದ್ದಾಗ ಶಾಸಕರಿಗೆ ಸ್ಪಂದಿಸುತ್ತಿರಲಿಲ್ಲ. ಹಲವು ಶಾಸಕರು ಕಣ್ಣೀರು ಹಾಕಿದ್ದಾರೆ. ಪಕ್ಷ ಅಂತಹ ತಪ್ಪಿನಿಂದ ಸೋತಿದೆ. ಅವರ ತಪ್ಪಿನಿಂದ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಲಿಲ್ಲ. ಕೆಲವು ನಿರ್ಣಯ ಮಾಡಬೇಕಿತ್ತು, ಮಾಡದ ಕಾರಣ ಸೋತಿದೆ. ರಾಜ್ಯದಲ್ಲಿ ಅಪ್ಪ, ಮಕ್ಕಳು, ಮಾವ, ಅಳಿಯ ಇವರೇ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳಾಗಿದ್ದಾರೆ. ನಮ್ಮ ಪಕ್ಷದಲ್ಲೂ ಹಾಗೇ ಆಗಿದೆ. ನಮ್ಮ ಮಗಳಿಗೆ ಕೊಟ್ಟಿಲ್ಲ, ನನ್ನ ಮಗನಿಗೆ ಕೊಟ್ಟಿಲ್ಲ, ನನ್ನ ಮಗ ಸಮರ್ಥನಿದ್ದ ಎಂದು ಎರಡೂ ಪಕ್ಷದಲ್ಲಿ ನಡೆಯುತ್ತಿದೆ. ಈ ಲೋಕಸಭೆ ಚುನಾವಣೆ ಅಪ್ಪ, ಮಕ್ಕಳು, ಅಳಿಯ ಮಗಳು ಎಂದೇ ಆಗಿದೆ. ಲೋಕಸಭೆಗೆ ಕಾಂಗ್ರೆಸ್ ಸಚಿವರು ಒಬ್ಬರೂ ನಿಲ್ಲಲಿಲ್ಲ. ಸೋತರೆ ಮಂತ್ರಿ ಸ್ಥಾನ ಹೋಗುತ್ತದೆ ಎಂದು ಯಾರೂ ಸ್ಪರ್ಧಿಸಿಲ್ಲ ಎಂದಿದ್ದಾರೆ.