ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ರೈತ ಸಂಘದ ಅಧ್ಯಕ್ಷ ಎಸ್. ಬಿ. ಶೇಖರ್ ಅಲ್ಲಿನ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.
ತೂಕದಲ್ಲಿ ಮೋಸ ಮಾಡಿ, ರೈತರಿಂದ ಹಣವನ್ನು ವಸೂಲಿ ಮಾಡುತ್ತಿದ್ದು, ಹಿರಿಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇದು ಇದೇ ರೀತಿ ಮುಂದುವರಿದರೇ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಆವರಣದಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆದು ೧೫ ದಿನಗಳು ಕಳೆದಿದ್ದು, ಪ್ರಾರಂಭದಿಂದಲೂ ಇಲ್ಲಿಯತನಕ ಟೆಂಡರ್ ಪಡೆದವರಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಇತ್ತ ಕಡೆ ತಲೆ ಹಾಕಿಲ್ಲ ಇದರಿಂದ ಇಲ್ಲಿನ ಸಮಸ್ಯೆಗಳನ್ನು ಯಾರಿಗೆ ಹೇಳುವುದು ಎಂದು ದೂರಿದರು
೫೦ ಕೆ ಜಿ ಚೀಲದ ರಾಗಿಗೆ ೫೨ ಕೆಜಿ ರಾಗಿಯನ್ನು ತೂಕ ಹಾಕಿ ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆ ಮತ್ತು ಒಂದು ಕ್ವಿಂಟಾಲ್ ರಾಗಿಗೆ ರೈತರಿಂದ ೨೦ ರೂ ಪಡೆಯುವ ಬದಲು ೫೦ ರೂ ಗಳನ್ನು ಬಲವಂತವಾಗಿ ತೆಗೆದು ಕೊಳ್ಳುತ್ತಿದ್ದಾರೆ ಎಂದು ಶೇಖರ್ ಆರೋಪಿಸಿದರು
ರೈತರು ಬರಗಾಲದ ಪರಿಸ್ಥಿತಿಯಲ್ಲೂ ಸಹ ಸಾಲ, ಸೋಲ ಮಾಡಿ, ಬೆವರು ಸುರಿಸಿ ಕಷ್ಟ ಪಟ್ಟು ದುಡಿಮೆ ಮಾಡಿ ಅದರಲ್ಲಿ ಅಲ್ಪ, ಸ್ವಲ್ಪ ವಾಗಿ ಬಂದಂತಹ ರಾಗಿ ಬೆಳೆಯನ್ನು ಖರೀದಿ ಕೇಂದ್ರಕ್ಕೆ ತಂದರೆ ಇಲ್ಲಿಯೂ ರೈತರಿಗೆ ಮೋಸ ವಾಗುತ್ತಿದೆ.
ಸ್ಥಳಕ್ಕೆ ಅಧಿಕಾರಿಗಳು ಬಂದು ಇದನ್ನು ಸರಿಪಡಿಸದಿದ್ದರೆ ರೈತ ಸಂಘದ ವತಿಯಿಂದ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಎಸ್ ಜೆ ಕುಮಾರ, ಗೌತಮ್, ಶ್ರೀನಿವಾಸ, ನಂಜುಂಡೇಗೌಡ, ಡ್ರೈವರ್ ಕುಮಾರ್ ಸೇರಿದಂತೆ ಇನ್ನಿತರ ರೈತರು ಇದ್ದರು