ರಾಮನಗರ: ಮತದಾನ ಪ್ರತಿ ಭಾರತೀಯ ಪ್ರಜೆಯ ಹಕ್ಕು, ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತಪ್ಪದೆ ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಅವರು ತಿಳಿಸಿದರು.
ಅವರು ಚನ್ನಪಟ್ಟಣ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ-೨೦೨೪ ರ ಮತದಾನ ಜಾಗೃತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವ-ಸಹಾಯ ಮಹಿಳೆಯರಿಂದ ರಂಗೋಲಿ ಸ್ಪರ್ಧೆ, ಜಾಥ ಹಾಗೂ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿರಿಯರಿಗೆ, ಮಹಿಳೆಯರಿಗೆ, ವಿಶೇಷಚೇತನರಿಗೆ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಿದೆ. ಯಾರು ಮತದಾನದಿಂದ ದೂರ ಉಳಿಯದೆ, ನಿಮ್ಮ ಹಕ್ಕನ್ನು ಚಲಾಯಿಸುವಂತೆ ಕರೆ ನೀಡಿದರು.
ಚನ್ನಪಟ್ಟಣ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮನು ಬಿ.ಕೆ ಅವರು ಮಾತನಾಡಿ, ಚನ್ನಪಟ್ಟಣ ತಾಲ್ಲೂಕಿನ ವ್ಯಾಪ್ತಿಯ ಆಸ್ಪತ್ರೆ, ಬಸ್ ನಿಲ್ದಾಣ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತ ಜಾಗೃತಿ ಕುರಿತು ಬೀದಿ ನಾಟಕ, ಸಂಗೀತ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿದ್ದೇವೆ. ಸಾರ್ವಜನಿಕರು ಯಾವುದೇ ಆಮಿಷಗಳಿಗೆ ಒಳಗಾಗದೆ ಶೇ. ೧೦೦ ರ? ಮತದಾನ ಆಗಬೇಕು ಎಂಬುದಾಗಿದೆ. ಎಲ್ಲರು ತಪ್ಪದೆ ಹತ್ತಿರದ ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸಿ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ತಹಶಿಲ್ದಾರ್ ನರಸಿಂಹ ಮೂರ್ತಿ, ನಗರಸಭೆ ಆಯುಕ್ತರಾದ ಪುಟ್ಟಸ್ವಾಮಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಸಿದ್ದರಾಜು, ಸಂಜೀವಿನಿ ಒಕ್ಕೂಟ ವಿಭಾಗದ ಸಿಬ್ಬದಿಗಳು, ಮಹಿಳೆಯರು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನಗರಸಭೆ ಸಿಬ್ಬಂದಿಗಳು ಹಾಜರಿದ್ದರು.