ಚಾಮರಾಜನಗರ : ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರಿಗೆ ಪತ್ನಿ ಹಾಗೂ ಮಗಳು ಇದ್ದರೂ ವೈವಾಹಿಕ ಜೀವನದ ಬಗ್ಗೆ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸದೆ ವಂಚಿಸಿದ್ದು, ಇವರ ನಾಮಪತ್ರವನ್ನು ಅಸಿಂಧುಗೊಳಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗೆ ಬಿಜೆಪಿ ದೂರು ನೀಡಿದೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ನಾಮಪತ್ರ ಸಲ್ಲಿಸುವಾಗ ನೀಡಿರುವ ಪ್ರಮಾಣ ಪತ್ರದಲ್ಲಿ ಪತ್ನಿ ಹಾಗೂ ಮಗಳ ಹೆಸರನ್ನು ಉಲ್ಲೇಖ ಮಾಡಿಲ್ಲ. ಜೊತೆಗೆ ಅವರ ಆದಾಯದ ಮೂಲಗಳನ್ನು ಸಹ ತಿಳಿಸಿಲ್ಲ. ಅವರಿಗೆ ಎಂ.ಕೆ.ಸವಿತಾ ಎಂಬ ಸರ್ಕಾರಿ ನೌಕರಿಯಲ್ಲಿರುವ ಪತ್ನಿ ಇದ್ದು, ಮಗಳು ಸಹ ಇದ್ದಾರೆ. ಈಗಾಗಲೇ ಚುನಾವಣಾಧಿಕಾರಿ ಸುನೀಲ್ ಬೋಸ್ ನಾಮಪತ್ರವನ್ನು ಕ್ರಮಬದ್ದಗೊಳಿಸಿದ್ದು.
ನಾವು ಸುನೀಲ್ ಬೋಸ್‌ಗೆ ಪತ್ನಿ ಹಾಗೂ ಮಗಳು ಇರುವ ಕುರಿತ ಛಾಯಾಚಿತ್ರಗಳು ಹಾಗೂ ಫೇಸ್ ಬುಕ್, ವಾಟ್ಸ್‌ಆಪ್, ದಾಖಲಾತಿಗಳ ಸಮೇತ ಮನವಿಯ ಸಲ್ಲಿಸಿದ್ದೇವೆ. ಇತ್ತೀಚೆಗೆ ಸಿದ್ದರಾಮಯ್ಯ ಸಹ ಸುನೀಲ್ ಬೋಸ್ ಅವರ ಮನೆಗೆ ಹೋಗಿ ಕುಟುಂಬದೊಂದಿಗೆ ಪೋಟೋ ತೆಗೆಸಿಕೊಂಡಿದ್ದಾರೆ. ಪ್ರಮಾಣ ಪತ್ರದಲ್ಲಿ ಎಂ.ಕೆ. ಸವಿತಾ ಅವರಿಂದ ೧ ಲಕ್ಷ ಸಾಲ ಪಡೆದಿರುವುದಾಗಿ ತೋರಿಸಿದ್ದಾರೆ. ಈ ಎಂ. ಸವಿತಾ ಯಾರು ಎನ್ನುವುದು ಸಾರ್ವಜನಿಕ ತಿಳಿಯಬೇಕಲ್ಲವೇ?. ಒಬ್ಬ ಹೆಣ್ಣು ಮಗಳು ಸುನೀ ಬೋಸ್‌ಗೆ ಸಾಲ ಕೊಟ್ಟಿದ್ದಾರೆ. ಅವರು ಯಾರು ಎಂಬ ಪ್ರಶ್ನೆ ಬರುತ್ತದೆ. ಹೀಗಾಗಿ ಎಲ್ಲಾ ಪ್ರಶ್ನೆಗಳನ್ನು ನಾವು ಚುನಾವಣಾಧಿಕಾರಿಗೆ ಸಲ್ಲಿಸಿರುವ ಮನವಿ ಪತ್ರದ ತಿಳಿಸಿದ್ದೇವೆ ಎಂದು ಬಿಜೆಪಿ ಚುನಾವಣಾ ಏಜೆಂಟ್ ಆಗಿರುವ ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ್ ಪ್ರಸಾದ್ ತಿಳಿಸಿದ್ದಾರೆ.