ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಅನುಭವಕ್ಕೂ, ಅವರ ಆಡಳಿತಕ್ಕೂ ಬಹಳ ವ್ಯತ್ಯಾಸವಿದೆ. ಈ ಹತ್ತು ತಿಂಗಳಿನಲ್ಲಿ ಸಿದ್ದರಾಮಯ್ಯನವರ ಕೆಟ್ಟ ಆಡಳಿತ ಹೇಗಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರೊಡನೆ ಬಹಿರಂಗ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಒಂದು ಸರ್ಕಾರವಿದೆ ಅಷ್ಟೇ. ಸಿದ್ದರಾಮಣ್ಣನ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಇಲಾಖೆಯಲ್ಲಿಯೂ ಒಂದು ಸಣ್ಣ ಕೆಲಸವೂ ಕೂಡ ಆಗಿಲ್ಲ.
ಗ್ರಾಮೀಣ ಅಭಿವೃದ್ಧಿಯಲ್ಲಿ ಕೆಲಸ ಆಗಿಲ್ಲ. ಜನರ ಕೆಲಸಗಳನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿಲ್ಲ. ಯಾವುದೇ ಇಲಾಖೆಯಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು. ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಿಟ್ಟಿದ್ದ ರು. ೧೧೩೦೦ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಕೊಟ್ಟಿದ್ದಾರೆ. ಎಸ್‌ಸಿ, ಎಸ್‌ಟಿ ಜನಾಂಗಗಳಿಗೆ ಸಾಲಸೌಲಭ್ಯ ಸಿಗುತ್ತಿಲ್ಲ, ಗಂಗಾ ಕಲ್ಯಾಣ ಬೋರ್ ಸಿಗುತ್ತಿಲ್ಲ. ಇನ್ನು ರೈತರ ಬಗ್ಗೆಯಂತೂ ಈ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಕಾಳಜಿಯೂ ಇಲ್ಲ.
ಬಡತನದ ವಿರುದ್ಧ ಸಮರ ಸಾರಿರುವ ಪ್ರಧಾನಿ ಮೋದಿ: ಬಡತನದ ವಿರುದ್ಧ ಸಮರ ಸಾರಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ದಿನದ ೧೮ ಗಂಟೆ ದೇಶಕ್ಕಾಗಿ ಕೆಲಸ ಮಾಡುತ್ತಾರೆ. ಆರೋಗ್ಯ ಭಾರತದ ಕನಸು ನನಸಾಗಿಸಲು ಪಣತೊಟ್ಟು ಯಶಸ್ಸಿನತ್ತ ದಾಪುಗಾಲು ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಲೋಕಸಭಾ ಚುನಾವಣಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಿಳಿಸಿದರು.