ಇಂಗ್ಲೆಂಡ್ : ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ೧೧ ಮಂದಿ ಪುರುಷರು ಮತ್ತು ಓರ್ವ ಮಹಿಳೆಯನ್ನು ಇಂಗ್ಲೆಂಡ್‌ನ ಇಮಿಗ್ರೇಷನ್ (ವಲಸೆ) ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರೆಲ್ಲರೂ ಭಾರತೀಯ ಪ್ರಜೆಗಳು ಎಂದು ಹೇಳಲಾಗಿದೆ. ಅವರೆಲ್ಲರೂ ಹಾಸಿಗೆ ಮತ್ತು ಕೇಕ್ ತಯಾರಿಕಾ ಫ್ಯಾಕ್ಟರಿಗಳಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್ ಪ್ರದೇಶದ ಫ್ಯಾಕ್ಟರಿಯಲ್ಲಿ ಅಕ್ರಮ ಕೆಲಸ ನಡೆಯುತ್ತಿದೆ ಎಂಬ ಗುಪ್ತಚರ ಮಾಹಿತಿ ಆಧಾರದ ಮೇಲೆ ಇಮಿಗ್ರೇಷನ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಇಂಗ್ಲೆಂಡ್ ಗೃಹ ಕಚೇರಿ ಮಾಹಿತಿ ನೀಡಿದೆ. ಮಿಡ್‌ಲ್ಯಾಂಡ್ಸ್‌ನಲ್ಲಿದ್ದ ಹಾಸಿಗೆ ಫ್ಯಾಕ್ಟರಿಯಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ. ಸಮೀಪವೇ ಇದ್ದ ಕೇಕ್ ಫ್ಯಾಕ್ಟರಿಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಅಲ್ಲದೆ, ಮನೆಗೆಲಸ ಮಾಡುತ್ತಿದ್ದ ಮಹಿಳೆಯನ್ನು ಮನೆಯೊಂದರಲ್ಲಿ ಬಂಧಿಸಲಾಗಿದೆ. ಇವೆಲ್ಲರೂ ಭಾರತೀಯ ಪ್ರಜೆಗಳು ಎಂದು ಗೃಹ ಕಚೇರಿ ತಿಳಿಸಿದೆ.
ಬಂಧಿತರು ಇಂಗ್ಲೆಂಡ್‌ನ ವೀಸಾ ಷರತ್ತುಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಒಬ್ಬರು ಕಾನೂನುಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ. ನಾಲ್ವರು ಅಪರಾಧಿಗಳನ್ನು ಇಂಗ್ಲೆಂಡ್‌ನಿಂದ ಭಾರತಕ್ಕೆ ಗಡೀಪಾರು ಮಾಡಲು ಪರಿಗಣಿಸುವ ಪ್ರಕ್ರಿಯೆ ಬಾಕಿ ಇವೆ. ಉಳಿದ ಎಂಟು ಮಂದಿಯನ್ನು ಗೃಹ ಕಚೇರಿಗೆ ನಿಯಮಿತವಾಗಿ ವರದಿ ಮಾಡಿಕೊಳ್ಳುವ ಷರತ್ತಿನ ಮೇಲೆ ಜಾಮೀನು ನೀಡಲಾಗಿದೆ? ಎಂದು ಅಧಿಕಾರಿಗಳು ತಿಳಿಸಿದ್ದಾರೆ.