ದಾವಣಗೆರೆ : ಡಾ. ಬಿ.ಆರ್ ಅಂಬೇಡ್ಕರ್ ರವರು ಹಾಕಿಕೊಟ್ಟಂತಹ ಸಂವಿಧಾನದಿಂದ ಭಾರತ ವಿಶ್ವದಲ್ಲಿಯೇ ಒಂದು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಯಶಸ್ಸು ಕಂಡಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದರು.
ಭಾನುವಾರ ಏ.14 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 133 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ನಂತರ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರು ಚಿಕ್ಕ ವಯಸ್ಸಿನಿಂದಲೆ ಸಾಕಷ್ಟು ಕಷ್ಟ, ಅಸ್ಪೃಶ್ಯತೆಯನ್ನು ಎದುರಿಸಿದ್ದಾರೆ. ಆದರೂ ಎಂತಹ ಕಷ್ಟಗಳು ಬಂದರೂ ಸಹ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸಮಾಜದಲ್ಲಿರುವ ಸಂಘರ್ಷಗಳನ್ನ ಸಮರ್ಥವಾಗಿ ಎದುರಿಸಿ ಭಾರತ ದೇಶದ ರತ್ನವಾಗಿ ಅವರು ಬೆಳೆದರು. ಅಂತಹ ಆದರ್ಶ ಪುರುಷನನ್ನ ನಾವೆಲ್ಲರೂ ಸ್ಮರಿಸುವ ದಿನ ಇದಾಗಿದ್ದು ಅವರು ತಮ್ಮ ನಿರಂತರ ಅಧ್ಯಯನಶೀಲತೆಯಿಂದ ವಿಶ್ವವೇ ಬೆರಗಾಗುವಂತೆಮಾಡಿದ್ದಾರೆ.
ಅವರು ನ್ಯೂಯಾರ್ಕ್ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಪದವಿ ಪಡೆದು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪದವಿ ಪಡೆದರು. ಕೊಲಂಬಿಯಾ ವಿಶ್ವವಿದ್ಯಾನಿಲಯ ಅಧ್ಯಯನ ವರದಿಯನ್ವಯ ಇಲ್ಲಿ ಅಭ್ಯಾಸ ಮಾಡಿದಂತಹ ವಿದ್ಯಾರ್ಥಿಗಳಲ್ಲಿ ಇಡೀ ವಿಶ್ವದಲ್ಲಿ ಹೆಚ್ಚು ಪ್ರಭಾವವುಂಟು ಮಾಡಿದವರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರು ಪ್ರಥಮ ಆದ್ಯತೆಗೆ ಬರುತ್ತಾರೆ ಎಂದರು. ಡಾ.ಬಾಬಾ ಸಾಹೇಬರು ಹಾಕಿಕೊಟ್ಟಂತಹ ಆದರ್ಶಗಳು, ತತ್ವಗಳು, ಸಿದ್ಧಾಂತಗಳು , ಸಕರಾತ್ಮಕ ಪರಿಣಾಮವನ್ನು ಉಂಟು ಮಾಡಿವೆ. ಇದು ಒಂದು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಅವರು ಕಾರಣೀಭೂತರಾಗಿದ್ದಾರೆ ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಡಲಾಗಿದೆ. ಅಂತಹ ಅಧ್ಯಯನ ಮಾಡಿರುವ ಡಾ.ಬಿ.ಆರ್ .ಅಂಬೇಡ್ಕರ್ ಅವರಿಗೆ ನಾವೆಲ್ಲರೂ ಋಣಿಯಾಗಿರಬೇಕಾಗಿರುತ್ತದೆ.
ಅಂಬೇಡ್ಕರ್ ಅವರು ರಚಿಸಿದಂತಹ ಸಂವಿಧಾನವನ್ನು ಇನ್ನೂ ಆಳವಾಗಿ ಅಧ್ಯಯನ ಮಾಡಬೇಕು, ಅದರಲ್ಲಿ ಸಮಾನತೆ, ಬ್ರಾತೃತ್ವದ ಪರಿಕಲ್ಪನೆಗಳು, ಸಮ ಸಮಾಜದ ಸೃಷ್ಟಿ ಮಾಡಬೇಕೆಂಬ ದೃಷ್ಟಿಕೋನ, ಉತ್ತಮ ಸಮಾಜವನ್ನು ನಿರ್ಮಾಣ ಮಾಡಲಿದೆ. ಅಂತಹ ಆದರ್ಶ ಪುರುಷ ಹಾಕಿಕೊಟ್ಟಂತಹ ಸಿದ್ಧಾಂತಗಳನ್ನು ಪಾಲಿಸಿ ಅಸ್ಪೃಶ್ಯತೆ ವಿರೋಧಿಗಳಾಗಿ, ಸಮ ಸಮಾಜದ ನಿರ್ಮಾಣ ಮಾಡಲು ನಾವು ಕೂಡ ಕಾರಣಭೂತರಾಗೋಣ ಎಂದರು.
ಮೇ 7ನೇ ರಂದು ಲೋಕಸಭಾ ಚುನಾವಣೆ ಮತದಾನ ನಡೆಯುತ್ತಿದೆ, ಡಾ.ಬಿ.ಆರ್.ಅಂಬೇಡ್ಕರ್ ರವರ ಪರಿಶ್ರಮಕ್ಕೆ ಸಾಕಾರವಾಗಿ 18 ವರ್ಷ ತುಂಬಿದ ಪ್ರತಿಯೊಬ್ಬರು ಅಂದು ಮತಗಟ್ಟೆಗೆ ಬಂದು ಮುಕ್ತ, ನ್ಯಾಯಸಮ್ಮತವಾಗಿ, ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಸಾರ್ಥಕತೆ ಮೆರೆಯೋಣ ಎಂದು ತಿಳಿಸಿದರು.