Friday, May 23, 2025
Google search engine

Homeರಾಜ್ಯಛತ್ತೀಸ್‌ಘಡ್ : ೨೯ ನಕ್ಸಲರ ಹತ್ಯೆ: ಬಿಎಸ್‌ಎಫ್ ಜತೆ ಗುಂಡಿನ ಚಕಮಕಿ

ಛತ್ತೀಸ್‌ಘಡ್ : ೨೯ ನಕ್ಸಲರ ಹತ್ಯೆ: ಬಿಎಸ್‌ಎಫ್ ಜತೆ ಗುಂಡಿನ ಚಕಮಕಿ

ಕಾಂಕೇರ್: ಛತ್ತೀಸಗಢದ ಕಾಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ೨೯ ಮಂದಿ ನಕ್ಸಲರು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ. ಸ್ಥಳದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೂಡ ಅವರು ತಿಳಿಸಿದ್ದಾರೆ. ಬಿನಾಗುಂಡಾ ಮತ್ತು ಕೊರೊನಾರ್ ಗ್ರಾಮಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಮಧ್ಯಾಹ್ನ ೨ ಗಂಟೆಯ ಸುಮಾರಿಗೆ ಗುಂಡಿನ ಚಕಮಕಿ ನಡೆಯಿತು. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹಾಗೂ ರಾಜ್ಯ ಪೊಲೀಸ್ ಇಲಾಖೆಯ ಜಿಲ್ಲಾ ಮೀಸಲು ಪಡೆಯ ಸಿಬ್ಬಂದಿ ಜಂಟಿಯಾಗಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಈ ಚಕಮಕಿ ನಡೆದಿದೆ ಎಂದು ಬಸ್ತಾರ್ ವಲಯದ ಐಜಿಪಿ ಸುಂದರರಾಜ್ ಪಿ. ಹೇಳಿದ್ದಾರೆ.

ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಕರ್ತರಾದ ಶಂಕರ್, ಲಲಿತಾ, ರಾಜು ಮತ್ತು ಇತರ ಕೆಲವರು ಇರುವ ಖಚಿತ ಸುಳಿವು ಆಧರಿಸಿ ಭದ್ರತಾ ಪಡೆಗಳು ಕಾರ್ಯಾಚರಣೆಗೆ ಮುಂದಾದವು ಎಂದು ಐಜಿಪಿ ಹೇಳಿದ್ದಾರೆ. ಭದ್ರತಾ ಪಡೆಯ ಸಿಬ್ಬಂದಿ ಗಸ್ತಿನಲ್ಲಿ ಇದ್ದಾಗ ಎರಡೂ ತಂಡಗಳ ನಡುವೆ ತೀವ್ರ ಪ್ರಮಾಣದ ಗುಂಡಿನ ಚಕಮಕಿ ನಡೆಯಿತು. ಎಕೆ-೪೭ ಮಾದರಿಯ ಬಂದೂಕುಗಳು, ಪಿಸ್ತೂಲುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ನಕ್ಸಲ್ ಪೀಡಿತ ಬಸ್ತಾರ್ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ (ಏಪ್ರಿಲ್ ೧೯) ಮತದಾನ ನಡೆಯಲಿದೆ. ಬಸ್ತಾರ್ ಪ್ರದೇಶಕ್ಕೇ ಸೇರಿರುವ ಕಾಂಕೇರ್ ಕ್ಷೇತ್ರದಲ್ಲಿ ಏಪ್ರಿಲ್ ೨೬ರಂದು ಮತದಾನ ನಡೆಯಲಿದೆ. ಇನ್ನಷ್ಟು ನಕ್ಸಲರಿಗಾಗಿ ಶೋಧ ಮುಂದುವರಿದಿದೆ.

ಭದ್ರತಾ ಸಿಬ್ಬಂದಿ ಹಾಗೂ ನಕ್ಸಲರ ನಡುವೆ ಆಗಾಗ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಸುಂದರರಾಜ್ ಮಾಹಿತಿ ನೀಡಿದ್ದಾರೆ. ಗಾಯಗೊಂಡಿರುವ ಮೂವರು ಭದ್ರತಾ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ನಕ್ಸಲರ ಸಂಖ್ಯೆಯನ್ನೂ ಪರಿಗಣಿಸಿದರೆ, ಈ ವರ್ಷದಲ್ಲಿ ಬಸ್ತಾರ್ ಪ್ರದೇಶದಲ್ಲಿ ಒಟ್ಟು ೭೯ ನಕ್ಸಲರು ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ ಹತ್ಯೆಯಾಗಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿ ಏಪ್ರಿಲ್ ೨ರಂದು ನಡೆದ ಎನ್‌ಕೌಂಟರ್‌ನಲ್ಲಿ ೧೩ ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿತ್ತು.

RELATED ARTICLES
- Advertisment -
Google search engine

Most Popular