ಮೈಸೂರು: ನಗರದಲ್ಲಿ ಮೇ ೩ರಂದು ಸುರಿದ ಭಾರಿ ಗಾಳಿ-ಮಳೆಗೆ ಜೆಎಸ್‌ಎಸ್ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಮುಗಿಸಿಕೊಂಡು ದ್ವಿಚಕ್ರ ವಾಹನಗಳಲ್ಲಿ ಹಿಂದಿರುಗುವ ಸಂದರ್ಭದಲ್ಲಿ ಮರಗಳು ಬಿದ್ದು ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿರುವ ಎರಡು ಪ್ರತ್ಯೇಕ ಘಟನೆಗಳು ಸಂಭವಿಸಿವೆ.
ನಗರದ ಲಲಿತ್‌ಮಹಲ್ ಹೆಲಿಪ್ಯಾಡ್ ಹತ್ತಿರ ಕು. ಸಹನಾ ಎಂಬ ವಿದ್ಯಾರ್ಥಿಯು ದ್ವಿಚಕ್ರ ವಾಹನದ ಮೇಲೆ ಚಲಿಸುತ್ತಿದ್ದಾಗ ದಿಢೀರನೆ ಮರವೊಂದು ಉರುಳಿಬಿದ್ದದ್ದರಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಾರಂಜಿ ಕೆರೆಯ ಹತ್ತಿರ ಅಮೀರ್ ಇರ್ಫಾನ್ ಮತ್ತು ಎಂ.ಡಿ. ಶಂಸುದ್ಧೀನ್ ಎಂಬ ವಿದ್ಯಾರ್ಥಿಗಳ ಮೇಲೆ ಮರ ಬಿದ್ದು ಗಾಯಾಳು ಗಳಾಗಿರುವುದರಿಂದ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಣಕ್ಕೆ ಅಪಾಯವಿಲ್ಲವೆಂದು ವೈದ್ಯರು ತಿಳಿಸಿರುತ್ತಾರೆ.