ವಿಶ್ವದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಒಂದಾದ ಕಾನ್ ಫಿಲ್ಮ್ ಫೆಸ್ಟಿವೆಲ್‌ಗೆ ಮೈಸೂರಿನ ಹುಡುಗ ಚಿದಾನಂದ ನಾಯಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ ಕಿರುಚಿತ್ರ ಆಯ್ಕೆಯಾಗಿತ್ತು. ಇಂಥದ್ದೊಂದು ಫೆಸ್ಟಿವೆಲ್ ಗೆ ಆಯ್ಕೆಯಾದ ಮೊದಲ ಕನ್ನಡಿಗರ ಕಿರುಚಿತ್ರ ಇದಾಗಿತ್ತು. ಇದೀಗ ಮೊದಲ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ ನಿರ್ದೇಶಕರು.
ರಚನೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಚಿದಾನಂದ ಹೊತ್ತಿದ್ದರೆ, ವಿ. ಮನೋಜ್ ಅವರ ಸಂಕಲನವಿದೆ. ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ ಸ್ಟಿಟ್ಯೂಟ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಅಲ್ಲದೇ ಕನ್ನಡದ ಅನೇಕ ಕಲಾವಿದರು ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ.
ಕಾನ್ ಚಿತ್ರೋತ್ಸವಕ್ಕೆ ತಮ್ಮ ಕಿರುಚಿತ್ರ ಆಯ್ಕೆಯಾಗಿರುವುದು ಸಹಜವಾಗಿಯೇ ಚಿದಾನಂದ್ ಅವರಿಗೆ ಸಂಭ್ರಮ ತಂದಿತ್ತು. ಕಾನ್ ನೋಡುಗರು ಈ ಕಿರುಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಕೊನೆಗೂ ಕನ್ನಡದ ಹುಡುಗ ಗೆದ್ದಿದ್ದಾನೆ. ಈ ಮೂಲಕ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾನೆ.




