ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಹಗರಣದ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಿರಸ್ಕರಿಸಿದ್ದು, ಭವಾನಿ ರೇವಣ್ಣ ಬಂಧನದ ಭೀತಿಯಲ್ಲಿದ್ದಾರೆ.
ವಿಶೇಷ ತನಿಖಾ ದಳದಿಂದ ಬಂಧನ ಭೀತಿ ಎದುರಿಸುತ್ತಿರುವುದರಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮೇ ೨೯ರಂದು ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಇಂದು ಪ್ರಕಟಿಸಿದರು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು ಪ್ರಕರಣದ ಅನೇಕ ಆರೋಪಿಗಳ ಜೊತೆ ಭವಾನಿ ಫೋನ್ ಸಂಭಾಷಣೆ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಸಂಭಾಷಣೆಯಲ್ಲಿ ಭವಾನಿಯವರ ಪಾತ್ರವನ್ನು ನಿರೂಪಿಸುವ ಹಲವು ಸ್ವಾರಸ್ಯಕರ ಅಂಶಗಳಿವೆ ಎಂದಿದ್ದರು.
ಭವಾನಿ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು ಭವಾನಿ ವಿರುದ್ಧದ ಆರೋಪಗಳು ರಾಜಕೀಯ ಷಡ್ಯಂತ್ರದಿಂದ ಕೂಡಿವೆ. ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ. ಆರೋಪಿಯು ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ. ಆದ್ದರಿಂದ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.