ಮಂಗಳೂರು (ದಕ್ಷಿಣ ಕನ್ನಡ): ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೋಳಿಯಾರ್ ಮಸೀದಿ ಬಳಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಡ್ಯಾನ್ಸ್ ಮಾಡಿರೋ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಮೊನ್ನೆಯಷ್ಟೇ ಬಿಜೆಪಿ ಅಭ್ಯರ್ಥಿ ಪರ ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯ ಕರೋಪಾಡಿ ಗ್ರಾಮದ ಮಸೀದಿ ಮುಂಭಾಗ ಜೈ ಶ್ರೀರಾಮ್, ಜೈ ಮೋದಿ ಎಂದು ಘೋಷಣೆ ಕೂಗಿ ಕುಣಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕರೋಪಾಡಿ ಗ್ರಾಮದ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದರು. ಇತ್ತೀಚೆಗೆ ಕಂಕನಾಡಿ ಮಸೀದಿ ಸಮೀಪದ ರಸ್ತೆಯಲ್ಲಿ ನಮಾಝ್ ಮಾಡಿದ್ದರ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತ ಕೇಸ್ ಹಾಕಿದ್ದರು. ಆದರೆ ಮಸೀದಿ ಮುಂಭಾಗ ಈ ರೀತಿ ವರ್ತಿಸಿದವರ ವಿರುದ್ಧ ಯಾಕೆ ಪೊಲೀಸ್ ಇಲಾಖೆ ಮೌನವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.