ಮಡಿಕೇರಿ : ಕರ್ನಾಟಕ ಸರ್ಕಾರದ ಬಸ್ ಸೇವೆಗಳಲ್ಲೊಂದಾದ ನೂತನ ‘ಅಶ್ವಮೇಧ’ ಬಸ್‌ಗೆ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಗುರುವಾರ ಚಾಲನೆ ನೀಡಿದರು. ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದ ಶಾಸಕರು, ಮಡಿಕೇರಿ-ಸೋಮವಾರಪೇಟೆ-ಅರಕಲಗೋಡು-ಚೆನ್ನರಾಯಪಟ್ಟಣ ಮಾರ್ಗವಾಗಿ ಪ್ರತಿದಿನ ಬೆಳಗ್ಗೆ 10.15ಕ್ಕೆ ಹೊರಟು ಸಂಜೆ 4.45ಕ್ಕೆ ಬೆಂಗಳೂರು ತಲುಪಲಿದೆ ಎಂದು ಮಾಹಿತಿ ನೀಡಿದರು.
ಮಡಿಕೇರಿ-ಸೋಮವಾರಪೇಟೆ ಮಾರ್ಗವಾಗಿ ಬೆಂಗಳೂರಿಗೆ ತೆರಳಬೇಕೆಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದು, ಬೇಡಿಕೆ ಈಡೇರಿದೆ ಎಂದರು. ಸೋಮವಾರಪೇಟೆ ಮಾರ್ಗದಿಂದ 3 ಬಸ್, ಕುಶಾಲನಗರದಿಂದ 2 ಬಸ್ ಸಂಚರಿಸುತ್ತಿವೆ ಎಂದು ಮಡಿಕೇರಿ ಕೆಎಸ್ ಆರ್ ಟಿಸಿ ಘಟಕ ಮಾಹಿತಿ ನೀಡಿದೆ. ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕದಲ್ಲಿ 97 ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಕುಶಾಲನಗರ ಕೆಎಸ್ ಆರ್ ಟಿಸಿ ಆರಂಭವಾದ ನಂತರ ಹೆಚ್ಚಿನ ಬಸ್ ಗಳು ಸಂಚರಿಸಲಿವೆ ಎಂದು ಡಾ.ಮಂಥರಗೌಡ ಮಾಹಿತಿ ನೀಡಿದರು. ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ವೀರಭದ್ರಸ್ವಾಮಿ, ಸಂಚಾರ ನಿಯಂತ್ರಕ ಮತ್ತಿತರರು ಉಪಸ್ಥಿತರಿದ್ದರು.