ನವದೆಹಲಿ: ಗೃಹ ಬಳಕೆಯ ಸ್ಟೈನ್‌ಲೆಸ್ ಸ್ಟೀಲ್ ಮತ್ತು ಅಲ್ಯೂಮಿನಿಯಂ ಪಾತ್ರೆಗಳ ಮೇಲೆ ಐಎಸ್‌ಐ ಗುರುತನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಗ್ರಾಹಕರ ಸುರಕ್ಷತೆ ಮತ್ತು ವಸ್ತುಗಳ ಗುಣಮಟ್ಟ ಹೆಚ್ಚಿಸಲು ಸರ್ಕಾರ ಈ ಕ್ರಮಕೈಗೊಂಡಿದೆ ಎಂದು ಭಾರತೀಯ ಮಾನದಂಡ ಮಂಡಳಿಯು (ಬಿಐಎಸ್) ತಿಳಿಸಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿ ಬರುವ ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (ಡಿಪಿಐಐಟಿ) ಗುಣಮಟ್ಟ ನಿಯಂತ್ರಣ ಕುರಿತು ಮಾರ್ಚ್ ೧೪ರಂದು ಆದೇಶ ಹೊರಡಿಸಿತ್ತು. ಐಎಸ್‌ಐ ಗುರುತು ಇಲ್ಲದ ಸ್ಟೈನ್‌ಲೆಸ್ ಸ್ಟೀಲ್ ಮತ್ತು ಅಲ್ಯೂಮಿನಿಯಂ ಪಾತ್ರೆಗಳ ತಯಾರಿಕೆ, ಆಮದು, ಮಾರಾಟ, ವಿತರಣೆ, ಸಂಗ್ರಹಣೆ ಅಥವಾ ಮಾರಾಟ ಪ್ರದರ್ಶನವನ್ನು ನಿಷೇಧಿಸಲಾಗಿದೆ.
ಈ ಆದೇಶ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಗುಣಮಟ್ಟದ ನಿರ್ವಹಣೆಗಾಗಿ ಸ್ಟೈನ್‌ಲೆಸ್ ಸ್ಟೀಲ್ ವಸ್ತುಗಳಿಗೆ ಐಎಸ್೧೪೭೫೬:೨೦೨೨ ಮತ್ತು ಅಲ್ಯೂಮಿನಿಯಂ ಪಾತ್ರೆಗಳಿಗೆ ಐಎಸ್೧೬೬೦:೨೦೨೪ ಪ್ರಮಾಣ ಪತ್ರ ಪಡೆಯಬೇಕಿದೆ. ಈ ಮಾನದಂಡವು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಲಿದೆ ಎಂದು ಹೇಳಿದೆ.