ಹುಣಸೂರು: ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಬಿಳಿಕೆರೆ ಹೋಬಳಿಯ ಹೊಸರಾಮೇನಹಳ್ಳಿಯಲ್ಲಿ ನಡೆದಿದ್ದು, ತಂತಿ ತುಂಡಾಗಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದರೂ ಸರಿಪಡಿಸದ ಚೆಸ್ಕಾಂ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ದಿ.ಯ.ಸಿದ್ದನಾಯ್ಕರ ಮೊಮ್ಮಗ ಮಂಚನಾಯ್ಕ(18) ಮೃತ ಯುವಕ.
ಈತ ಮೂಲತಃ ಗಾವಡಗೆರೆ ಹೋಬಳಿಯ ಮಂಚಬಾಯನಹಳ್ಳಿಯ ದಿ.ಕೃಷನಾಯ್ಕ-ಲಕ್ಷ್ಮಮ್ಮರ ಪುತ್ರನಾಗಿದ್ದು, ಬಹಳ ವರ್ಷಗಳಿಂದ ತಾತನ ಮನೆಯಲ್ಲೇ ವಾಸವಾಗಿದ್ದ, ಈತನೇ ತಾತನ ಮನೆಯನ್ನು ನಿರ್ವಹಣೆ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ. ಈತನೇ ಕುಟುಂಬದ ಆಧಾರವಾಗಿದ್ದನು.
ಗ್ರಾಮದ ಚನ್ನೇಗೌಡರ ಶುಂಠಿ ಹೊಲದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಮಂಚ ನಾಯ್ಕ ಜು.26ರ ಶುಕ್ರವಾರ ಬೆಳಿಗ್ಗೆ ಕಾರ್ಯ ನಿಮಿತ್ತ ಹೊಲಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ತಂತಿ ಕಾಣಿಸದೆ ತುಳಿದಿದ್ದರಿಂದ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಬಗ್ಗೆ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಳಿಕೆರೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಶವ ಒಪ್ಪಿಸಲಾಯಿತು.
ಚೆಸ್ಕಾಂ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆರೋಪ;
ತಂತಿ ತುಂಡಾಗಿ ಬಿದ್ದಿರುವ ಬಗ್ಗೆ ಜು.25ರ ಗುರುವಾರವೇ ಸ್ಥಳೀಯ ಲೈನ್‌ಮ್ಯಾನ್‌ಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸದ ಪರಿಣಾಮ ಅಮಾಯಕ ಯುವಕ ಬಲಿಯಾಗಿದ್ದಾನೆಂದು ಆರೋಪಿಸಿ ಸ್ಥಳಕ್ಕಾಗಮಿಸಿದ ಚೆಸ್ಕಾಂ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡರು.
ಐದು ಲಕ್ಷ ಪರಿಹಾರ:
ಗ್ರಾಮಸ್ಥರು ವಿದ್ಯುತ್ ತಂತಿ ತುಂಡಾಗಿರುವ ಬಗ್ಗೆ ಲೈನ್‌ಮ್ಯಾನ್‌ಗೆ ತಿಳಿಸಿದ್ದೇವೆಂದು ಹೇಳುತ್ತಿದ್ದಾರೆ. ಲೈನ್‌ಮ್ಯಾನ್ ವಸಂತ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಕಚೇರಿಗೂ ಸಹ ಬಂದಿಲ್ಲ, ಆತನ ಮೊಬೈಲ್‌ನ ಕಾಲ್ ಲಿಸ್ಟ್ ಪರಿಶೀಲಿಸಿ ತಪ್ಪೆಸಗಿದ್ದರೆ ಕ್ರಮವಹಿಸಲಾಗುವುದು. ತಕ್ಷಣಕ್ಕೆ ಟಿ.ಸಿ.ಯಲ್ಲಿ ವಿದ್ಯತ್ ಸಂಪರ್ಕ ಕಡಿತಗೊಳಿಸಲಾಗಿದೆ. ನಿಗಮದ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಬಿಳಿಕೆರೆ ಎಇಇ ವಿಜಯರತ್ನ ತಿಳಿಸಿದ್ದಾರೆ.