ರಾಮನಗರ: ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗುವ ವ್ಯಸನ ಮುಕ್ತ ದಿನಾಚರಣೆಯನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಆರ್. ಅವರು ನಿರ್ದೇಶನ ನೀಡಿದರು.
ಅವರು ಜು.೨೯ರ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಅಪರ ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಆಚರಿಸುವ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಮೂಲಕ ಅವರಲ್ಲಿ ದುಶ್ಚಟಗಳಿಂದಾಗುವ ಹಾನಿಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಈಗಾಗಲೇ ಶಾಲಾ ಕಾಲೇಜು ವ್ಯಾಪ್ತಿಯ ೧೦೦ ಮೀಟರ್ ಅಂತರದಲ್ಲಿ ತಂಬಾಕು ಪದಾರ್ಥಗಳ ಮಾರಾಟ ನಿಷೇಧವಿದೆ. ಅದಾಗ್ಯೂ ಅವುಗಳ ಉಲ್ಲಂಘನೆ ಕಂಡುಬಂದರೆ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಆ. ೦೧ ರಂದು ಶಾಲೆ-ಕಾಲೇಜುಗಳಲ್ಲಿ ಜರುಗುವ ಪ್ರಾರ್ಥನೆ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಶಾಲಾ ಹಾಗೂ ಕಾಲೇಜುಗಳಿಗೆ ಶಿಕ್ಷಣ ಇಲಾಖೆಯವರು ನಿರ್ದೇಶನ ನೀಡುವಂತೆ ಸೂಚಿಸಿದ ಅವರು ಹೆಚ್ಚು ವ್ಯಸನಿಗಳಿರುವ ಜಿಲ್ಲೆಯ ಗ್ರಾಮಗಳನ್ನು ಗುರುತಿಸಿ, ಅಲ್ಲಿಯೂ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯತ್‌ನಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಬೀಡಿ-ಸಿಗರೇಟು ಸೇದುವುದು, ತಂಬಾಕು ಅಗಿಯುವುದು, ಡ್ರಗ್ಸ್ ಬಳಕೆಯಂತೆಯೇ ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಸುವುದು ಕೂಡ ಇತ್ತೀಚಿನ ದಿನಗಳಲ್ಲಿ ವ್ಯಸನವಾಗಿ ಮಾರ್ಪಟಿದೆ ಮಾದಕ ವ್ಯಸನಗಳಿಂದ ಮುಕ್ತರಾಗಲು ನುರಿತ ಉಪನ್ಯಾಸರಿಂದ ಉಪನ್ಯಾಸ ಹಮ್ಮಿಕೊಳ್ಳಬೇಕು ಹಾಗೂ ಶಾಲೆಗಳಲ್ಲಿ ಈ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಪ್ರಬಂಧ ಸ್ಪರ್ಧೆಗಳನ್ನು ಸಹ ಹಮ್ಮಿಕೊಂಡು ಉತ್ತಮವಾಗಿ ಪ್ರಬಂಧ ರಚಿಸಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ವಿತರಿಸುವಂತೆ ಅವರು ನಿರ್ದೇಶನ ನೀಡಿದರು.
ನಗರಸಭಾ ವ್ಯಾಪ್ತಿಯಲ್ಲಿ ಮತ್ತೇರಿಸುವ ಗುಟ್ಕಾ ಪೌಚ್‌ಗಳ ಮಾರಾಟ ಕಂಡುಬಂದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಯುವ ಜನತೆ ದುಷ್ಚಟಗಳಿಂದ ದೂರವಿರಬೇಕು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ., ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಆರೋಗ್ಯ ಇಲಾಖೆಯ ಡಾ. ಆದರ್ಶ, ಶಿಕ್ಷಣ ಇಲಾಖೆಯ ಚಿನ್ನಸ್ವಾಮಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.