Tuesday, May 20, 2025
Google search engine

Homeಸ್ಥಳೀಯಮೈಸೂರು: ವ್ಹೀಲ್‌ಚೇರ್ ಇಲ್ಲದೇ ಪ್ಲಾಸ್ಟಿಕ್ ಚೇರ್‌ನಲ್ಲಿ ರೋಗಿಯ ಸಾಗಾಟ

ಮೈಸೂರು: ವ್ಹೀಲ್‌ಚೇರ್ ಇಲ್ಲದೇ ಪ್ಲಾಸ್ಟಿಕ್ ಚೇರ್‌ನಲ್ಲಿ ರೋಗಿಯ ಸಾಗಾಟ

ಕೆ.ಆರ್ ಆಸ್ಪತ್ರೆಯಲ್ಲಿ ಆಡಳಿತದ ಅದ್ವಾನ, ಸಿಬ್ಬಂದಿಗಳ ನಿರ್ಲಕ್ಷ್ಯ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿರುವ ಕೆ.ಆರ್ ಆಸ್ಪತ್ರೆಯಲ್ಲಿನ ಅದ್ವಾನಗಳು ಎಲ್ಲೆ ಮೀರಿದ್ದು, ಆಡಳಿತ ವೈಫಲ್ಯದಿಂದ ಇಲ್ಲಿನ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ನಿರ್ದಾಕ್ಷೀಣ್ಯವಾಗಿ ವರ್ತಿಸುತ್ತಿರುವ ಕಾರಣ ರೋಗಿಗಳು ಹೈರಾಣರಾಗುತ್ತಿದ್ದಾರೆ.

ವೃದ್ಧ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ಕೆ ಆರ್ ಆಸ್ಪತ್ರೆಗೆ ಕರೆತಂದಾಗ, ಸಿಬ್ಬಂದಿಗಳು ವ್ಹೀಲ್ ಚೇರ್ ಕೊಡಲಿಲ್ಲ. ಕೇಳಿದರೆ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ವೃದ್ಧೆಯ ಜತೆ ಬಂದಿದ್ದ ಯುವಕರು ತಾವು ಮನೆಯಿಂದ ತಂದಿದ್ದ ಪ್ಲಾಸ್ಟಿಕ್ ಚೇರ್‌ನಲ್ಲಿಯೇ ವೃದ್ಧೆಯನ್ನು ಚಿಕಿತ್ಸೆಗೆ ಹೊತ್ತೊಯ್ದ ಘಟನೆ ನಡೆದಿದೆ. ಇದನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದರು.

ವಿಷಯ ತಿಳಿದ ಶಾಸಕ ಕೆ.ಹರೀಶ್‌ಗೌಡ ಸ್ಥಳಕ್ಕೆ ಧಾವಿಸಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಶೋಭಾರನ್ನು ತೀವ್ರ ತರಾಟೆಗೆ ತೆಗೆದುಕೊಂಡರು, ಬಳಿಕ ದಾಸ್ತಾನು ಕೊಠಡಿಯ ಬೀಗ ಒಡೆಸಿ ತೆಗೆದು ನೋಡಿದಾಗ ಅಲ್ಲಿ ಹೊಸ ಹತ್ತಾರು ವ್ಹೀಲ್ ಚೇರ್‌ಗಳು ಇದ್ದವು. ಇದನ್ನು ಕಂಡು ಸಿಡಿಮಿಡಿಗೊಂಡ ಶಾಸಕ ಹರೀಶ್‌ಗೌಡ, ಅಲ್ರಿ ಸರ್ಕಾರದಿಂದ ಕೊಟ್ಟ ಹೊಸ ಚೇರ್‌ಗಳನ್ನು ಯಾಕೆ ಇಟ್ಟುಕೊಂಡಿದ್ದೀರಿ, ಇಲ್ಲಿ ಪೂಜೆ ಮಾಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸೂಪರಿಂಟೆಂಡೆಂಟ್ ಶೋಭಾ ಇವು ಬಂದು ಮೂರು ತಿಂಗಳಾಗಿವೆ, ನನಗೆ ದಾಸ್ತಾನು ಕೊಠಡಿ ಕೀ ಕೊಟ್ಟಿಲ್ಲ ಎಂದು ಹಾರಿಕೆ ಉತ್ತರ ನೀಡಿದರು. ಇದಕ್ಕೆ ತೃಪ್ತರಾಗದ ಶಾಸಕ ಹರೀಶ್‌ಗೌಡ ಆರೋಗ್ಯ ಸಚಿವರನ್ನು ಆಸ್ಪತ್ರೆಗೆ ಕರೆತಂದು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದಾಗ, ಸೂಪರಿಟೆಂಡೆಂಟ್ ಶೋಭಾ ಅವರು ರಾಜಿನಾಮೆ ನೀಡುವುದಾಗಿ ಹೇಳಿ, ಶಾಸಕರ ಎದುರೇ, ಅಲ್ಲಿಂದ ಕಾಲ್ಕಿತ್ತರು.

ಮೈಸೂರು, ಮಂಡ್ಯ, ಕೊಡಗು, ಹಾಸನ, ಚಾ.ನಗರ ಜಿಲ್ಲೆಗಳ ಸಾವಿರಾರು ರೋಗಿಗಳಿಗೆ ಆಶಾ ಕಿರಣವಾಗಿರುವ ಕೆಆರ್ ಆಸ್ಪತ್ರೆ ಆಡಳಿತ ಕುಸಿದಿದೆ. ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ರೋಗಿಗಳಿಗೆ ಕನಿಷ್ಠ ವ್ಹೀಲ್ ಚೇರ್ ಕೊಡುವ ಸೌಜನ್ಯವೂ ಇಲ್ಲಿನ ಸಿಬ್ಬಂದಿಗೆ ಇಲ್ಲವಾಗಿದೆ. ವಾಸ್ತವದಲ್ಲಿ ಡಿ-ಗ್ರೂಪ್ ನೌಕರರ ಮೇಲೆ ಇಲ್ಲಿನ ಅಧಿಕಾರಿಗಳ ಹತೋಟಿ ಇಲ್ಲದಂತಾಗಿದೆ. ಯಾರೂ ಯಾರ ಮಾತನ್ನೂ ಕೇಳದ ಪರಿಸ್ಥಿತಿ ಇಲ್ಲಿ ಉದ್ಭವವಾಗಿದ್ದು, ಕೆ ಆರ್ ಆಸ್ಪತ್ರೆಯೇ ರೋಗಗ್ರಸ್ತವಾಗಿದೆ. ಇದಕ್ಕೆ ಮೇಜರ್ ಸರ್ಜರಿ ಅಗತ್ಯ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಿರ್ಲಕ್ಷ ಮಾಡಿದವರ ವಿರುದ್ಧ ಕ್ರಮ: ಇಲ್ಲಿ ಡೀನ್ ಮತ್ತು ಸೂಪರಿಂಟೆಂಡೆಂಟ್ ಎಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಗಳು ಅಧಿಕಾರಿಗಳ ಮಾತು ಕೇಳುತ್ತಿಲ್ಲ. ರೋಗಿಗಳ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಮಾಡಿದವರ ಮೇಲೆ ೧೦೦ಕ್ಕೆ ೧೦೦ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹರೀಶ್ ಗೌಡ ಹೇಳಿದ್ದಾರೆ. ಪ್ರಕರಣದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯ ಎದ್ದು ಕಾಣ್ತಿದೆ. ಕ್ರಮಕ್ಕೆ ಆಗ್ರಹಿಸಿ ಸಚಿವರಿಗೂ ಪತ್ರ ಬರೆಯುತ್ತೇನೆ ಎಂದು ಜೋರು ದನಿಯಲ್ಲಿ ಹೇಳಿದರು.


ಎಲ್ಲರ ಅಮಾನತ್ತಿಗೆ ಪತ್ರ: ಕೆ.ಆರ್ ಆಸ್ಪತ್ರೆಯ ಆಡಳಿತಾಧಿಕಾರಿ ದಾಕ್ಷಾಯಿಣಿ ಪ್ರತಿಕ್ರಿಯಿಸಿ, ಘಟನೆಗೆ ಸಂಬಂಧಪಟ್ಟ ಎಲ್ಲರ ಅಮಾನತ್ತಿಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಇವತ್ತೇ ಎಲ್ಲರಿಗೂ ನೋಟಿಸ್ ಕೊಡ್ತೀನಿ. ಸಂಜೆಯೊಳಗೆ ಕೆಟ್ಟು ಹೋಗಿರುವ ಲಿಫ್ಟ್ ರಿಪೇರಿ ಮಾಡಿಸುತ್ತೇನೆ, ಮೂರು ದಿನಗಳಲ್ಲಿ ಮುರಿದಿರುವ ಎಲ್ಲಾ ವ್ಹೀಲ್ ಚೇರ್‌ಗಳನ್ನ ದುರಸ್ತಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.

ಆರ್‌ಟಿಐ ಕಾರ್ಯಕರ್ತರ ಬೆದರಿಕೆ ಇದೆ: ಕೆ.ಆರ್ ಆಸ್ಪತ್ರೆ ಮೇಲ್ವಿಚಾರಕಿ ಶೋಭಾ ಮಾತನಾಡಿ, ನನಗೆ ಆರ್‌ಟಿಐ ಕಾರ್ಯಕರ್ತರ ಬೆದರಿಕೆ ಇದೆ. ೧೦ ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ. ಸೆಕ್ಯೂರಿಟಿ ಸೇರಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರ ಬಗ್ಗೆ ಪತ್ರ ಬರೆದರೆ ೨೦ಕ್ಕೂ ಆರ್‌ಟಿಐ ಕಾರ್ಯಕರ್ತರು ಬಂದು ಪ್ರಶ್ನೆ ಮಾಡ್ತಾರೆ. ಇಲ್ಲಿ ವ್ಯವಸ್ಥೆ ಮೊದಲಿನಿಂದ ಹಾಳಾಗಿದೆ. ಡೀನ್ ಸೇರಿದಂತೆ ಎಲ್ಲರಿಗೂ ಮಾಹಿತಿ ಕೊಟ್ಟಿದ್ದೇನೆ. ಎಲ್ಲರಿಗೂ ಇದರ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular