ಬೆಂಗಳೂರು: ರಾಜ್ಯಪಾಲರು ವಿಧೇಯಕ ವಾಪಸ್ ಕಳುಹಿಸಿದಾಗ ಅದಕ್ಕೆ ಸ್ಪಷ್ಟೀಕರಣ ಕೊಟ್ಟು ಮನವರಿಕೆ ಮಾಡುವುದು ಸರ್ಕಾರದ ಕರ್ತವ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮುಜರಾಯಿ ಇಲಾಖೆಗೆ ಸಂಬಂಧಿಸಿದ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳನ್ನು ರೂಪಿಸಿದೆ. ಇಂತಹ ವಿಧೇಯಕಗಳ ಸಾಧಕ-ಬಾಧಕಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಹತ್ತಾರು ವಿಧೇಯಕಗಳನ್ನು ವಾಪಸ್ ಕಳುಹಿಸಿದ್ದರು ಎಂದರು.
ರಾಜಭವನ ಎಂದರೆ ಬಿಜೆಪಿ ಕಚೇರಿ ಎನ್ನುವುದು ಹಳಸಿದ ಮಾತು. ವಿಧೇಯಕವನ್ನು ಮರಳಿ ಕಳುಹಿಸಿದರೆ ಅದಕ್ಕೆ ಸರ್ಕಾರ ಸ್ಪಷ್ಟೀಕರಣ ಕೊಟ್ಟು ಗೊಂದಲ ನಿವಾರಿಸಬೇಕು. ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಈ ಕರ್ತವ್ಯ ಮಾಡದೇ ಇದ್ದಲ್ಲಿ ಅದು ಸರ್ಕಾರದ ನಿರ್ಲಕ್ಷ್ಯವೇ ಹೊರತು ರಾಜ್ಯಪಾಲರ ತಪ್ಪಲ್ಲ. ಸರ್ಕಾರ ತಪ್ಪು ಮಾಡಿ ಅದನ್ನು ರಾಜ್ಯಪಾಲರ ಮೇಲೆ ಹೇರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದರು.