Wednesday, May 21, 2025
Google search engine

Homeರಾಜ್ಯನಾಗಮಂಗಲ ಗಲಭೆ : ಇದು ಕಾಂಗ್ರೆಸ್ ಪ್ರಾಯೋಜಿತ ಪಿತೂರಿ: ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ

ನಾಗಮಂಗಲ ಗಲಭೆ : ಇದು ಕಾಂಗ್ರೆಸ್ ಪ್ರಾಯೋಜಿತ ಪಿತೂರಿ: ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ

ನಾಗಮಂಗಲ: ಗಣೇಶ ಮೆರವಣಿಗೆ ವೇಳೆ ಪಟ್ಟಣದಲ್ಲಿ ನಡೆದ ಗಲಭೆ ಪೂರ್ವಯೋಜಿತ ಕೃತ್ಯ, ವ್ಯವಸ್ಥಿತ ಪಿತೂರಿ. ಅಷ್ಟೇ ಅಲ್ಲ, ಇದು ಕಾಂಗ್ರೆಸ್ ಪ್ರಾಯೋಜಿತ ಗಲಭೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ನಾಗಮಂಗಲದ ಗಲಭೆ ಪೀಡಿತ ಪ್ರದೇಶಗಳಿಗೆ ಇಂದು ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ದುಷ್ಕರ್ಮಿಗಳ ದಾಳಿಗೆ ತುತ್ತಾದ ಅಂಗಡಿ, ಮಳಿಗೆಗಳನ್ನು ವೀಕ್ಷಿಸಿದ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ವ್ಯವಸ್ಥಿತವಾಗಿ ಗಲಭೆಗಳನ್ನು ಸೃಷ್ಟಿ ಮಾಡುವುದು ಕಾಂಗ್ರೆಸ್ ಗೆ ಕರತಲಾಮಲಕ. ಹಿಂದಿನಿಂದಲೂ ಅದನ್ನು ಮಾಡಿಕೊಂಡು ಬಂದಿದೆ. ೧೯೯೦ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರಾಮನಗರ, ಚನ್ನಪ್ಪಟ್ಟಣದಲ್ಲಿ ಕೋಮುಗಲಭೆ ಸೃಷ್ಟಿಸಿ ಬೆಂಕಿ ಹಾಕಲಾಯಿತು. ಅವಳಿ ಪಟ್ಟಣಗಳು ಹೊತ್ತಿ ಉರಿದವು. ಅದೇ ಮಾದರಿಯಲ್ಲಿ ನಾಗಮಂಗಲದಲ್ಲಿ ಗಲಭೆ ಎಬ್ಬಿಸಲಾಗಿದೆ. ಡಿಜಿ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟು ಸುಟ್ಟು ಹಾಕಲಾಯಿತು. ಅದಕ್ಕೂ ಕಾಂಗ್ರೆಸ್ ನಾಯಕರೇ ಕಾರಣ. ಆ ಪ್ರಕರಣದಲ್ಲಿ ಜೈಲಿಗೆ ಹೋದವರು ಏನಾಗಿದ್ದಾರೋ ಗೊತ್ತಿಲ್ಲ. ನಾಗಮಂಗಲದಲ್ಲಿ ಈಗ ಯಾವ ದುರುದ್ದೇಶ ಇಟ್ಟುಕೊಂಡು ಗಲಭೆ ಸೃಷ್ಟಿ ಮಾಡಲಾಗಿದೆಯೋ ಗೊತ್ತಿಲ್ಲ ಎಂದು ಕೇಂದ್ರ ಸಚಿವರು ಅನುಮಾನ ವ್ಯಕ್ತಪಡಿಸಿದರು.

ಇಂಥ ಗಲಾಟೆಗಳನ್ನು ಮಾಡಿಸುವುದರಲ್ಲಿ ಕಾಂಗ್ರೆಸ್ ಎಕ್ಸ್ ಪರ್ಟ್. ನಾಗಮಂಗಲದಲ್ಲಿಯೂ ಕಾಂಗ್ರೆಸ್ ಚಿತಾವಣೆಯ ಬಗ್ಗೆ ಅನುಮಾನ ಇದೆ. ಈಗ ಚನ್ನಪಟ್ಟಣದಲ್ಲಿ ಉಪ ಚುನಾವಣೆ ಬರುತ್ತಿದೆ. ಬೇರೆ ಬೇರೆ ಘಟನೆಗಳು ಕೂಡ ನಡೆಯುತ್ತಿವೆ. ಹೀಗಾಗಿ ಒಂದು ಸಮುದಾಯದ ಓಲೈಕೆ ಮಾಡಲು ಈ ಸಂಚು ರೂಪಿಸಿರಬಹುದು. ಇಡೀ ಘಟನೆಯನ್ನು ನೋಡಿದರೆ ನಾಗಮಂಗಲದ ಕೃತ್ಯದ ಹಿಂದೆ ಕಾಂಗ್ರೆಸ್ ಇರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದರು.

ಈ ಘಟನೆಗೆ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ಹಾಗೂ ಸ್ಥಳೀಯ ಪೊಲೀಸರ ಕರ್ತವ್ಯ ಲೋಪವೂ ಕಾರಣ ಎಂದು ದೂರಿದ ಅವರು; ಪೊಲೀಸರು ನಿಜವಾದ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆಯಾಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವರು ಆಗ್ರಹಪಡಿಸಿದರು.

RELATED ARTICLES
- Advertisment -
Google search engine

Most Popular