ರಾಮನಗರ: ಮಾಗಡಿ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ರಾಜ್ಯ ಸರ್ಕಾರ ಬದ್ದವಿದ್ದು, ೧೨೦ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಸೆ.೧೩ರ ಶುಕ್ರವಾರ ಮಾಗಡಿ ಪಟ್ಟಣದ ಹೊಸಪೇಟೆವೃತ್ತದಲ್ಲಿ ಆಯೋಜಿಸಲಾಗಿದ್ದ ಮಾಗಡಿ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ನೂತನವಾಗಿ ನಿರ್ಮಾಣಗೊಂಡಿರುವ ಬೆಂಗಳೂರು ಹಾಲು ಒಕ್ಕೂಟದ ಮಾಗಡಿ ನೂತನ ಶಿಬಿರ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನ ಹೊರವಲಯದಲ್ಲಿರುವ ಮಾಗಡಿ ಬಹಳ ಪ್ರಮುಖ ಪಟ್ಟಣವಾಗಿದ್ದು, ಇದು ಅಭಿವೃದ್ದಿಯಾಗಬೇಕೆನ್ನುವುದು ರಾಜ್ಯ ಸರ್ಕಾರದ ಆಕಾಂಕ್ಷೆಯಾಗಿದೆ, ಕೆಂಪೇಗೌಡರ ರಾಜಧಾನಿಯಾಗಿದ್ದ ಈ ಪಟ್ಟಣಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು, ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಆಚರಣೆಗೆ ತಂದು ಪ್ರಾಧಿಕಾರವನ್ನೂ ರಚನೆ ಮಾಡಲಾಯಿತು. ಇದರ ಉದ್ದೇಶ ಕೆಂಪೇಗೌಡರನ್ನು ಎಲ್ಲರೂ ಸ್ಮರಿಸಬೇಕು ಎನ್ನುವುದಾಗಿತ್ತು. ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ್ದು, ಅವರ ಜಯಂತ್ಯೋತ್ಸವವನ್ನು ಆಚರಿಸುವುದು ಸರ್ಕಾರದ ಕರ್ತವ್ಯ ಎಂದು ಭಾವಿಸಿ ೨೦೧೬-೧೭ ರಲ್ಲಿ ಆಚರಣೆಗೆ ತರಲಾಗಿತ್ತು, ಅದೀಗ ಮುಂದುವರಿದಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ೫೬ ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ರಾಜ್ಯದ ಸುಮಾರು ೧.೨೦ ಲಕ್ಷ ಕುಟುಂಬಗಳಿಗೆ ವಾರ್ಷಿಕವಾಗಿ ೫೦ ರಿಂದ ೬೦ ಸಾವಿರ ರೂ.ಗಳ ಆರ್ಥಿಕ ಸಹಾಯವನ್ನು ಗ್ಯಾರಂಟಿಗಳ ಮೂಲಕ ಒದಗಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಅನುದಾನವನ್ನು ಬೇರೆಯವರಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು, ಆದರೆ ೮೯.೬೨ ಕೋಟಿ ಮೊತ್ತದ ಅವ್ಯವಹಾರವಾಗಿದ್ದು, ಅದರಲ್ಲಿ ೫೬ ಕೋಟಿ ವಸೂಲು ಮಾಡಲಾಗಿದೆ. ಆದರೂ ಅಭಿವೃದ್ಧಿ ನಿಗಮಕ್ಕೆ ಈ ಮುಂಚೆ ನಿಗದಿಪಡಿಸಿರುವಂತೆ ಅನುದಾನವನ್ನು ನೀಡಿ, ಸಮುದಾಯದ ಅಭಿವೃದ್ಧಿಗೆ ಬಳಸಲಾಗುವುದು. ಎಸ್ ಸಿ ಎಸ್ ಪಿ / ಟಿಎಸ್ ಪಿ ಕಾನೂನನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಈ ರೀತಿಯ ಜನಪರ ಕಾನೂನು ಬೇರೆ ರಾಜ್ಯದಲ್ಲಿ ಜಾರಿಯಾಗಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಜನಸಂಖ್ಯೆಗೆ ಅನುಗುಣವಾಗಿ ಅವರ ಅಭಿವೃದ್ಧೀಗೆ ಪ್ರತ್ಯೇಕ ಅನುದಾನ ನೀಡುವ ಕಾನೂನು ಸರ್ಕಾರ ಮಾಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸದಾ ಬಡಜನರ ಪರವಾಗಿದೆ. ಶಕ್ತಿ ಯೋಜನೆಯಡಿ ೩.೫೦ ಕೋಟಿ ಜನ ಉಚಿತವಾಗಿ ಪ್ರಯಾಣಿಸಿದ್ದು, ಇದುವರೆಗೆ ೨೮೭ ಕೋಟಿ ಮಹಿಳೆಯರು ಯೋಜನೆಯ ಲಾಭ ಪಡೆದಿದ್ದಾರೆ. ನಾನು ಬಡವರ ಏಳಿಗೆಗಾಗಿಯೇ ಅಧಿಕಾರದಲ್ಲಿರುವುದು ಎಂದು ತಿಳಿಸಿರುವುದು. ಸರ್ಕಾರ ಹಾಲು ಉತ್ಪಾದಕರ , ದಲಿತರ, ಅಲ್ಪಸಂಖ್ಯಾತರ, ಬಡವರ ಪರವಾಗಿರಲಿದೆ. ನನ್ನ ಜೀವನ ತೆರೆದ ಪುಸ್ತಕವಿದ್ದಂತೆ.ರಾಜ್ಯದ ಜನರ ಅಭಿವೃದ್ಧಿಯಲ್ಲಿ ಯಾವುದೇ ರಾಜಿ ಇಲ್ಲ ಎಂದು ತಿಳಿಸಿದರು. ಹಾಲಿನ ದರ ಏರಿಸುವಂತೆ ಕಾರ್ಯಕ್ರಮದಲ್ಲಿ ಅಭಿಪ್ರಾಯಗಳು ವ್ಯಕ್ತವಾದ ಸಂದರ್ಭದಲ್ಲಿ ಲೀಟರ್ ಹಾಲಿಗೆ ೫ ರೂಪಾಯಿ ಏರಿಕೆಗೆ ಸಂಬಂಧಿಸಿದಂತೆ ಹಾಗೂ ಈ ಐದು ರೂಪಾಯಿಗಳು ನೇರವಾಗಿ ರೈತರಿಗೆ ತಲುಪುವ ಬಗ್ಗೆ ಹಾಗೂ ಪ್ರತಿ ಲೀಟರ್ ಹಾಲಿಗೆ ೨೦ ಪೈಸೆ ಪ್ರೋತ್ಸಾಹ ಧನವನ್ನು ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳಿಗೆ ನೀಡುವ ಬಗ್ಗೆ ಕೆಎಂಎಫ್ ನ ಸಭೆ ಕರೆದು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಮಾತನಾಡಿ, ರಾಜ್ಯದ ಎಲ್ಲಾ ಜಾತಿಯ ಬಡವರ ಕ್ಷೇಮಕ್ಕೆ ಅವರ ಹಿತ ರಕ್ಷಣೆಗಾಗಿ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಅನ್ನಭಾಗ್ಯದಿಂದ ಬಡವರಿಗೆ ನೆಮ್ಮದಿ ಬದುಕು ಲಭಿಸಿದೆ, ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ ಬಡವರ ಹಸಿವು ನೀಗಿದೆ ಎಂದರು. ತಾಲ್ಲೂಕಿನಲ್ಲಿ ಹೈನುಗಾರಿಕೆಯೆ ಬದುಕಿನ ಆಸರೆಯಾಗಿರುವವರಿಗೆ ಬೆಂಗಳೂರು ಹಾಲು ಒಕ್ಕೂಟದ ಮಾಗಡಿಯ ನ್ರತನ ಶಿಬಿರ ಕಚೇರಿ ಕ್ಷೀರ ಭವನ ಅನುಕೂಲವಾಗಿ ಪರಿಣಮಿಸಲಿದೆ, ಬೆಂಗಳೂರು ಹಾಲು ಒಕ್ಕೂಟದ ದೂರದೃಷ್ಟಿಯ ಶ್ರಮದಿಂದ ಈ ಕಟ್ಟಡ ನಿರ್ಮಾಣವಾಗಿದೆ ಸ್ಥಳೀಯ ಶಾಸಕರ ಬೇಡಿಕೆಗೆ ಸಹಮತವಿದೆ ಎಂದು ಹೇಳಿದರು.

ಹಾಲು ಉತ್ಪಾದಕರಿಗೆ ಹೆಚ್ಚಿನ ಲಾಭ ಉಳಿಯುವುದಿಲ್ಲ, ಹಸು ಹಾಗೂ ಆಹಾರ ಪದಾರ್ಥದ ಬೆಲೆ ಹೆಚ್ಚಾಗಿರುವ ಕಾರಣ ಹಾಲಿನ ದರ ಏರಿಕೆ ಮಾಡಬೇಕು ಹಾಗೂ ಆ ಸಂಪೂರ್ಣ ದರ ಹೈನುಗಾರರಿಗೆ ಹೋಗಬೇಕು, ಇಡೀ ದೇಶದಲ್ಲಿಯೇ ನಮ್ಮ ರಾಜ್ಯದಲ್ಲಿ ಹಾಲಿನ ದರ ಅತ್ಯಂತ ಕಡಿಮೆ ಇದೆ, ರಾಜ್ಯದಲ್ಲಿಕುಡಿಯುವ ನೀರಿಗಿಂತಲೂ ಹಾಲಿನ ದರ ಕಡಿಮೆ ಇದೆ ಹಾಲಿನ ದವರವನ್ನು ೫ ರೂ. ಹೆಚ್ಚು ಮಾಡಿ ಆ ಹಣವನ್ನು ರೈತರಿಗೆ ನೀಡಬಹುದಾಗಿದೆ ಎಂದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಸಿ ಬಾಲಕೃಷ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಾಗಡಿ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿಸಿದರು.
ಸಾರಿಗೆ, ಮುಜರಾಯಿ ಇಲಾಖೆ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ, ಉನ್ನತ ಶಿಕ್ಷಣ ಸಚಿವರಾದ ಎಂ.ಸಿ. ಸುಧಾಕರ್,ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ,ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಬಿ.ಝಡ್. ಜಮೀರ್ ಅಹ್ಮದ್ ಖಾನ್, ರಾಮನಗರ ಕ್ಷೇತ್ರದ ಶಾಸಕರಾದ ಇಕ್ಬಾಲ್ ಹುಸೇನ್, ನೆಲಮಂಗಲ ಕ್ಷೇತ್ರದ ಶಾಸಕರಾದ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಪುಟ್ಟಣ್ಣ, ಸುಧಾಮ್‌ದಾಸ್, ರಾಮೋಜಿ ಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷರಾದ ಎಚ್.ಪಿ. ರಾಜಕುಮಾರ್, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಉಪಾಧ್ಯಕ್ಷರಾದ ಎಂ. ಮಂಜುನಾಥ್ (ಕೆ.ಎಂ.ಎಂ), ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷರಾದ ನರಸಿಂಹಮೂರ್ತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ. ರಾಜು, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಪಿ. ನಾಗರಾಜ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವೇದಿಕೆಯಲ್ಲಿದ್ದರು.
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ನಿಗಮದ ನಿರ್ದೇಶಕರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಎಚ್.ಎನ್. ಅಶೋಕ್ ಸ್ವಾಗತಿಸಿದರು. ಕಾಮಗಾರಿಗಳು ಹಾಗೂ ಉದ್ಘಾಟನೆಯಾದ ಕಟ್ಟಡಗಳ ವಿವರ ಇಂತಿದೆ.
೮ ಕೋಟಿ ರೂಪಾಯಿ ವೆಚ್ಚದ ಮಾಗಡಿ ಪುರಸಭೆ ಮಾರುಕಟ್ಟೆ (ಅಂಗಡಿ) ಮಳಿಗೆಗಳ ನಿರ್ಮಾಣ, ಲೋಕೋಪಯೋಗಿ ಇಲಾಖೆ ವತಿಯಿಂದ ಮಾಗಡಿ ಪಟ್ಟಣದ ವ್ಯಾಪ್ತಿಯಲ್ಲಿ ಎಸ್.ಎಚ್.ಡಿ.ಪಿ. (ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ) ಯ ೨೦ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ, ಮಾಗಡಿಯ ಜೂನಿಯರ್ ಕಾಲೇಜ್ ಆವರಣದಲ್ಲಿ ೭ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆಡಿಟೋರಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಬೆಂಗಳೂರು ಹಾಲು ಒಕ್ಕೂಟದ ನೂತನ ಶಿಬಿರ ಕಚೇರಿ ಹಾಗೂಮಾಗಡಿ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಐಟಿಐ ಕಾಲೇಜನ್ನು ಉದ್ಘಾಟಿಸಿದರು. ಮಾಗಡಿ ತಾಲೂಕಿನ ಹಾರೋಹಳ್ಳಿ ಗ್ರಾಮದ ಪಾಲಿಟೆಕ್ನಿಕ್ ಕಾಲೇಜಿಗೆ,ಮಾಗಡಿ ಪಟ್ಟಣದಲ್ಲಿ ಅತ್ಯಾಧುನಿಕ ಗ್ರಂಥಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಮಾಗಡಿ ತಾಲೂಕು ಜೂನಿಯರ್ ಕಾಲೇಜಿನ ಕ್ರೀಡಾಂಗಣದ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದರು