ಕಾವ್ಯ ಪರಂಪರೆ ಅವಲೋಕನ, ಕವಿಗೋಷ್ಠಿ, ಅಭಿನಂದನಾ ಕಾರ್ಯಕ್ರಮ
ಮಂಡ್ಯ: ಬೇರು ಭೂಮಿ ಕಡೆ ಮುಖ ಮಾಡಿದರೆ ಚಿಗುರು ಆಕಾಶದ ಕಡೆಗೆ ಮುಖ ಮಾಡುತ್ತದೆ. ಡಿವಿಜಿ ಅವರು ಹೊಸ ಚಿಗುರು ಹಳೇ ಬೇರು ಕೂಡಿದರೆ ಮರ ಸೊಬಗು ಎಂದು ಹೇಳಿದ್ದರೆ, ಹಾಡು ಹಳೆಯದಾದರೇನು ಭಾವ ನವನವೀನ ಎನ್ನುತ್ತಾರೆ ಜಿಎಸ್‌ಎಸ್. ನನ್ನ ದೃಷ್ಟಿಯಲ್ಲಿ ಹಳೇ ದೇಹ ಹೊಸ ಮನಸ್ಸು ಕೂಡಿದರೆ ಜೀವನ ಸೊಗಸು ಎಂದು ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜಿನ ಶೈಕ್ಷಣಿಕ ಪಾಲುದಾರ ಮಂಜು ಮುತ್ತೆಗೆರೆ ತಿಳಿಸಿದರು.
ನಗರದ ಕನ್ನಿಕಶಿಲ್ಪ ನವೋದಯ ಎಜುಕೇಶನ್ ಟ್ರಸ್ಟ್ (ರಿ.), ಹಾಗೂ ವಿಕಾಸ ಟ್ರಸ್ಟ್ (ರಿ.) ಸಂಯುಕ್ತಾಶ್ರಯದಲ್ಲಿ ಸ್ಕಿಲ್‌ಫರ್ನ್ ಮಲ್ಟಿಮೀಡಿಯ ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಿದ್ದ “ಹಳೆ ಬೇರು – ಹೊಸ ಚಿಗುರು’’ ಕಾವ್ಯ ಚಿಂತನೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾವ್ಯ ಚಿಂತನೆಯ ಈ ಕಾರ್ಯಕ್ರಮಕ್ಕೆ ‘ಹಳೇ ಬೇರು ಹೊಸ ಚಿಗುರು’ ಶೀರ್ಷಿಕೆಯನ್ನು ನೀಡಿ ಹಿರಿಯ ಕವಿಗಳು ಹಾಗೂ ಯುವ ಕವಿಗಳನ್ನು ಒಂದೆಡೆ ಸೇರಿಸಿ, ಕಾವ್ಯ ಪರಂಪರೆಯ ಉಪನ್ಯಾಸವನ್ನು ಬೆಸೆಯಲಾಗಿದೆ. ಅರ್ಥಪೂರ್ಣ ಕಾರ್ಯಕ್ರಮ. ನವೋದಯ ಶಿಕ್ಷಣಕ್ಕೆ ಒಂದು ಒಳ್ಳೆಯ ಹೆಸರು ಕನ್ನಿಕ. ಅವರು ಮಂಡ್ಯದ ಆಸ್ತಿ. ಮಂಡ್ಯ ಜಿಲ್ಲೆಯ ಜವಾಹರ್ ನವೋದಯ ಶಾಲೆಗೆ ಪ್ರವೇಶ ಪಡೆಯಲು ಮಕ್ಕಳಿಗೆ ಉತ್ತಮ ತರಬೇತಿ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿತೆ ರಚನೆಯಲ್ಲಿ ಪ್ರಾಸಕ್ಕೆ ಗಂಟು ಬಿದ್ದರೆ ಉತ್ತಮ ಕವಿತೆಯಾಗದು. ಹೆಚ್ಚು ಹೆಚ್ಚು ಅಧ್ಯಯನ ಹಾಗೂ ಅನುಭವದ ನೆಲೆಯಲ್ಲಿ ಉತ್ತಮ ಕವಿತೆ ರಚನೆಯಾಗುವುದು. ರೋಷನ್ ಛೋಪ್ರಾ ಅವರ ಚುಟುಕುಗಳು ಕಚಗುಳಿ ಇಟ್ಟಿವೆ ಎಂದು ತಿಳಿಸುತ್ತಾ, ಇಂದು ಸಾಮಾಜಿಕ ಜಾಲತಾಣಗಳು ಮಾನವೀಯತೆಯನ್ನು ಜಾಲಾಡಿವೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಮಾತನಾಡುವ ಈ ಕಾರ್ಯಕ್ರಮ ವಿಶೇಷ ಅನುಭವ ತಂದುಕೊಟ್ಟಿದೆ ಎಂದು ತಿಳಿಸಿದರು.
“ಕನ್ನಡ ಕಾವ್ಯ ಪರಂಪರೆ- ಒಂದು ಅವಲೋಕನ” ಕುರಿತು ವಿಶೇಷ ಉಪನ್ಯಾಸ ನೀಡಿದ ಮದ್ದೂರು ಮಹಿಳಾ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕ ನಾಗರಾಜ್ ಸಬ್ಬನಹಳ್ಳಿ ಮಾತನಾಡಿ, ಎರಡು ಸಾವಿರ ವರ್ಷಗಳಿಂದ ನಾವು ಕನ್ನಡವನ್ನು ಬರವಣಿಗೆಯಲ್ಲಿ ಬಳಸುತ್ತಿದ್ದೇವೆ. ಅಂದರೆ ನಮ್ಮ ಭಾಷೆಯ ಪ್ರಾಚೀನತೆ ಅದಕ್ಕಿಂತ ಹಿಂದಿನದು ಎಂಬುದು ಅಚ್ಚರಿಗೆ ಕಾರಣವಾಗುತ್ತದೆ. ಹಾಗೆಯೇ ಕನ್ನಡದ ಕಾವ್ಯ ಪರಂಪರೆ ೧೨ನೇ ಶತಮಾನದ ಶರಣರ ಯುಗಕ್ಕೂ ಹಿಂದಿನದು ಎಂದು ತಿಳಿಸಿದರು.

ಕನ್ನಿಕಶಿಲ್ಪ ನವೋದಯ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಹೆಚ್.ಆರ್. ಕನ್ನಿಕ ಅವರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರಾಜು ಕೊತ್ತತ್ತಿ ಅವರನ್ನು ಅಭಿನಂದಿಸಿ ಮಾತನಾಡಿ, ಹಲವು ಕೃತಿಗಳನ್ನು ರಚಿಸಿ ೧೫೦ಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಕೊತ್ತತ್ತಿ ರಾಜು ಜಿಲ್ಲೆಯ ಎಲ್ಲ ಕವಿಗಳಿಗೆ ಆಪ್ತಮಿತ್ರ. ಸಹೃದಯಿ ಎಂದು ತಿಳಿಸಿದರು. ಅಭಿನಂದನೆ ಸ್ವೀಕರಿಸಿದ ರಾಜು ಕೊತ್ತತ್ತಿ ಮಾತನಾಡಿ, ಸ್ನೇಹಕ್ಕೋಸ್ಕರ ಕಾವ್ಯ, ಕಾವ್ಯಕ್ಕೋಸ್ಕರ ಸ್ನೇಹ ಎಂಬಂತಾಗಿದೆ ಈ ಕಾರ್ಯಕ್ರಮ. ಇಲ್ಲಿ ಎಲ್ಲ ಕಾವ್ಯ ಪ್ರೇಮಿಗಳು ಸದ್ದುಗದ್ದಲವಿಲ್ಲದೆ ಕುಳಿತು ಪ್ರೀತಿಯ ತಂಗಾಳಿಯಲ್ಲಿ ತೊಯ್ದಿದ್ದಾರೆ. ನನಗೆ ತೋರಿಸಿದ ಪ್ರೀತಿಗೆ ಧನ್ಯವಾದಗಳು ಎಂದು ತಿಳಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ವಿಕಾಸ ಟ್ರಸ್ಟ್ ಅಧ್ಯಕ್ಷ, ಹಿರಿಯ ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ, ಲೇಖಕಿ ಶುಭಶ್ರೀ ಪ್ರಸಾದ್, ಮಾರ್ಗದರ್ಶಿ ಟ್ರಸ್ಟ್ ಅಧ್ಯಕ್ಷ ಕೆ.ಸಿ.ಲೋಕೇಶ್, ವಕೀಲ ದೇವರಾಜ್ ಎಸ್. ಪಂಡಿತ್, ಉಪನ್ಯಾಸಕಿ ದಾಕ್ಷಾಯಿಣಿ ವೈ.ಸಿ., ನಿವೃತ್ತ ಕನ್ನಡ ಉಪನ್ಯಾಸಕ ನಾಗರಾಜು, ಆರ್‌ಎಪಿಸಿಎಂಎಸ್ ಲೆಕ್ಕಿಗರಾದ ಪ್ರಕಾಶ್ ಕಟ್ಟೆ ಮತ್ತಿತರು ಹಾಜರಿದ್ದರು.
ಗಾಮನಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಕೊತ್ತತ್ತಿ ಮಹಾದೇವ್ ಅವರು ಶುಶ್ರಾವ್ಯವಾಗಿ ಗೀತೆಗಳನ್ನು ಹಾಡಿ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದರು. ಭಾಗವಹಿಸಿದ್ದ ಕವಿಗಳು ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ರೋಷನ್ ಛೋಪ್ರಾ, ಡಿ.ಕೆ.ರಾಮಯ್ಯ ದ್ಯಾಪಸಂದ್ರ, ಕೋ.ನಾ. ಪುರುಷೋತ್ತಮ, ಮಾನಸ ಸಿ.ಎಂ., ಸುಪ್ರೀತಾ ಎಂ. ಆನಂದ್ ಹಾಗೂ ಆರ್. ಕೀರ್ತನಾ ಚುಟುಕುಗಳು ಸೇರಿದಂತೆ ವೈವಿಧ್ಯಮಯ ಕವಿತೆಗಳನ್ನು ವಾಚಿಸಿದರು.