ಶ್ರೀರಂಗಪಟ್ಟಣ: ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಬಗ್ಗೆ ಆರೋಪ ಹಿನ್ನೆಲೆ ಶ್ರೀರಂಗಪಟ್ಟಣ ತಾಲ್ಲೂಕು ಕಸಾಪ ಅಧ್ಯಕ್ಷ ಸ್ಥಾನದಿಂದ ಎಂ.ಬಿ.ಕುಮಾರ್ ಅವರನ್ನು ತೆರವುಗೊಳಿಸಿ ಕೇಂದ್ರ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್ ನಲ್ಲಿ ಮಂಡ್ಯದಲ್ಲಿ ಜರುಗುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರಾಗಿ ಎಂ.ಬಿ. ಕುಮಾರ್ ನಾಮ ನಿರ್ದೇಶನಗೊಂಡಿದ್ದರು. ಕೇಂದ್ರ ಪರಿಷತ್ತಿನ ಅಧ್ಯಕ್ಷರ ಅನುಮೋದನೆಗಾಗಿ ಕಳಿಸಿರುವ ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಘಟಕಗಳ ಕಾರ್ಯಕಾರಿ ಸಮಿತಿ ಸದಸ್ಯರ ವಿವರಗಳ ಅರ್ಜಿ ನಮೂನೆ ಕ್ರ.ಸಂ.13ರಲ್ಲಿ ತಮ್ಮ ವಿರುದ್ಧ ಯಾವುದೇ ಅಪರಾಧದ ಮೊಕದ್ದಮೆ ಇಲ್ಲವೆಂದು ಸುಳ್ಳು ಮಾಹಿತಿ ನೀಡಲಾಗಿತ್ತು.
ಆದರೆ ಈ ಮಾಹಿತಿ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಗೌರವ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷರ ಸ್ಥಾನದಿಂದ ಮಹೇಶ್ ಜೋಶಿ ಎಂ.ಬಿ.ಕುಮಾರ್ ಅವರನ್ನು ತೆರವುಗೊಳಿಸಿದ್ದಾರೆ.

ಕೊಲೆ ಆರೋಪಿಗೆ ಅಧ್ಯಕ್ಷ ಸ್ಥಾನ ನೀಡಿ ಕಸಾಪ ಎಡವಟ್ಟು ಮಾಡಿಕೊಂಡಿದ್ದು 2015ರ ಜನವರಿಯಲ್ಲಿ ನಡೆದಿದ್ದ ಕೊಲೆಯೊಂದರ ಆರೋಪದ ಮೇಲೆ ಎಂ.ಬಿ ಕುಮಾರ್ ಜಾಮೀನಿನಲ್ಲಿದ್ದರು. ಸ್ವತಃ ಸುದ್ದಿಗೋಷ್ಟಿ ನಡೆಸಿ ಕೊಲೆ ಆರೋಪದ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಸಂಪೂರ್ಣ ದಾಖಲೆ ಪರಿಶೀಲಿಸಿ ಅಧ್ಯಕ್ಷ ಸ್ಥಾನ ತೆರವುಗೊಳಿಸಿ ಕೇಂದ್ರ ಕಸಾಪ ಕ್ರಮವಹಿಸಿದೆ.