ಕಠ್ಮಂಡು: ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ನೇಪಾಳ ರಾಷ್ಟ್ರ ತತ್ತರಿಸಿ ಹೋಗಿದ್ದು, ಮಳೆಯಿಂದಾಗಿ ಸಂಭವಿಸಿದ ವಿವಿಧ ಪ್ರಕರಣಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ೧೧೨ಕ್ಕೆ ಏರಿಕೆಯಾಗಿದೆ.
ನಿರಂತರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ನೇಪಾಳದಲ್ಲಿ ಕನಿಷ್ಠ ೧೧೨ ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದ್ದು, ನೇಪಾಳದ ಕೆಲವು ಭಾಗಗಳು ಜಲಾವೃತಗೊಂಡಿವೆ.
ನಿರಂತರ ಮಳೆಯಿಂದಾಗಿ ಈವರೆಗೂ ೧೧೨ ಮಂದಿ ಸಾವಿಗೀಡಾಗಿದ್ದಾರೆ. ಅವರಲ್ಲಿ ೩೪ ಮಂದಿ ರಾಜಧಾನಿ ಕಠ್ಮಂಡು ಕಣಿವೆಯಲ್ಲಿಯೇ ಮೃತಪಟ್ಟಿದ್ದಾರೆ. ೩೬ ಜನ ಗಾಯಗೊಂಡಿದ್ದಾರೆ’ ಎಂದು ನೇಪಾಳ ಪೊಲೀಸರ ಉಪ ವಕ್ತಾರ ಬಿಷ್ಣೋ ಅಧಿಕಾರಿ ತಿಳಿಸಿದ್ದಾರೆ.
ಪ್ರವಾಹದಲ್ಲಿ ಒಟ್ಟು ೪೪ ಮಂದಿ ನಾಪತ್ತೆಯಾಗಿದ್ದು, ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ದೇಶದಾದ್ಯಂತ ೪೪ ಸ್ಥಳಗಳಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಕಠ್ಮಂಡುವಿನಲ್ಲಿ ಸುಮಾರು ೨೨೬ ಮನೆಗಳು ಮುಳುಗಡೆಯಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಮಾರು ೩,೦೦೦ ಭದ್ರತಾ ಸಿಬ್ಬಂದಿಯ ರಕ್ಷಣಾ ತಂಡವನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ದೇಶಾದ್ಯಂತ ಒಟ್ಟು ೭೯ ಮಂದಿ ನಾಪತ್ತೆಯಾಗಿದ್ದು, ಕಠ್ಮಂಡು ಕಣಿವೆಯಲ್ಲಿ ೧೬ ಮಂದಿ ಪತ್ತೆಯಾಗಿಲ್ಲ. ೩,೦೦೦ ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ದೇಶಾದ್ಯಂತ ೬೩ ಸ್ಥಳಗಳಲ್ಲಿ ಮುಖ್ಯ ಹೆದ್ದಾರಿಗಳನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ತುರ್ತುಸಭೆ ಕರೆದ ನೇಪಾಳ ಸರ್ಕಾರ: ಏತನ್ಮಧ್ಯೆ, ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಹಂಗಾಮಿ ಪ್ರಧಾನ ಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವ ಪ್ರಕಾಶ್ ಮಾನ್ ಸಿಂಗ್ ಅವರು ಗೃಹ ಸಚಿವರು, ಗೃಹ ಕಾರ್ಯದರ್ಶಿ ಮತ್ತು ಭದ್ರತಾ ಏಜೆನ್ಸಿಗಳ ಮುಖ್ಯಸ್ಥರು ಸೇರಿದಂತೆ ವಿವಿಧ ಸಚಿವರನ್ನು ಒಳಗೊಂಡ ತುರ್ತು ಸಭೆಯನ್ನು ಕರೆದಿದ್ದಾರೆ. ನೇಪಾಳದಾದ್ಯಂತ ಮೂರು ದಿನಗಳ ಕಾಲ ಎಲ್ಲಾ ಶಾಲೆಗಳನ್ನು ಮುಚ್ಚಲು ಮತ್ತು ನಡೆಯುತ್ತಿರುವ ಎಲ್ಲಾ ಪರೀಕ್ಷೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ.