ಯಳಂದೂರು: ೭೦ ನೇ ವನ್ಯಜೀವಿ ಸಪ್ತಾಹದ ನಿಮಿತ್ತ ಕೊಳ್ಳೇಗಾಲದಿಂದ ಯಳಂದೂರು ಪಟ್ಟಣದ ವರೆಗೆ ಪರಿಸರ ಸ್ನೇಹಿ ಸೈಕಲ್ ಬಳಕೆ ಉತ್ತೇಜನ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಭಾನುವಾರ ಹಮ್ಮಿಕೊಂಡಿದ್ದ ಸೈಕ್ಲೋಥಾನ್ ಸ್ಪರ್ಧೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶ ಹಾಗೂ ಕೊಳ್ಳೇಗಾಲದ ವನ್ಯಜೀವಿ ವಲಯದ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಶ್ರೀಪತಿ ಹಾಗೂ ಯಳಂದೂರು ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ಕರ್, ಅಕ್ಷಯ್, ಅಶೋಕ್ ಚಾಲನೆ ನೀಡಿದರು.
ಅರಣ್ಯ ಇಲಾಖೆಯ ಸಿಬ್ಬಂಧಿ, ಶಾಲಾ, ಕಾಲೇಜು ಶಿಕ್ಷಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಪಟ್ಟಣದ ಅರಣ್ಯ ಇಲಾಖೆಯ ಕಚೇರಿಯ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೊಳ್ಳೇಗಾಲದಿಂದ ಬಂದ ಸೈಕಲ್ ಸವಾರರಿಗೆ ಅರಣ್ಯ ಇಲಾಖೆಯ ಸಿಬ್ಬಂಧಿ ಇವರಿಗೆ ನೀಡಿದ್ದ ಪಾಸ್‌ಗಳನ್ನು ಪರಿಶೀಲಿಸಿ ಇವರ ಹೆಸರನ್ನು ನಮೂದಿಸಿ, ಸಹಿಯನ್ನು ಪಡೆದು ಇಲ್ಲಿಂದ ಮತ್ತೆ ಕೊಳ್ಳೇಗಾಲಕ್ಕೆ ತೆರಳಲು ಅನುವು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಇವರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕೊಳ್ಳೇಗಾಲ ವಾಸವಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ಗಣೇಶ್ ಮಾತನಾಡಿ, ಈ ಸೈಕ್ಲೋಥಾನ್ ಪರಿಸರ ಸಂರಕ್ಷಣೆಯ ಸಲುವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಆಯೋಜನೆ ಮಾಡಿದೆ. ಸೈಕಲ್ ಪರಿಸರ ಸ್ನೇಹಿಯಾಗಿದೆ. ಅರಣ್ಯ ಸಂಪತ್ತು ನಾಶವಾಗಲು ಪರಿಸರ ನಾಶ ಮಾಡುತ್ತಿರುವ ಮಾನವನ ಅತಿ ಆಸೆಯೇ ಕಾರಣವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಬೇಕು. ನಮ್ಮ ಕಾಲೇಜಿನ ೨೧ ಮಂದಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಕೊಳ್ಳೇಗಾಲದಿಂದ ಯಳಂದೂರಿಗೆ ಬಂದು ಮತ್ತೆ ಕೊಳ್ಳೇಗಾಲಕ್ಕೆ ವಾಪಸ್ಸಾಗಿ ೪೦ ಕಿ.ಮಿ. ದೂರವನ್ನು ಕ್ರಮಿಸಿದ್ದಾರೆ ಎಂದು ಮಾಹಿತಿ ನೀಡಿದರು. ವಿದ್ಯಾರ್ಥಿಗಳಾದ ಆಯಿಷಾ ಸಿದ್ಧಿಖಾ, ಕೃತಿ, ಆಧ್ಯಾ, ತಿಲಕ್, ಶರಣ್, ಕಮಲೇಶ್, ತೇಜಸ್ ಸೇರಿದಂತೆ ಅನೇಕ ಮಂದಿ ಇದರಲ್ಲಿ ಭಾಗವಹಿಸಿದ್ದರು.