ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಶ್ರೀ ವಾಲ್ಮೀಕಿ ಮಹರ್ಷಿ ರವರ ತತ್ವ ಆದರ್ಶ ಗುಣಗಳನ್ನು ಸರ್ವರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಆರ್.ಶ್ಯಾಮಸುಂದರ್ ಹೇಳಿದರು.
ಸಾಲಿಗ್ರಾಮ ಪಟ್ಟಣದ ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀ ವಾಲ್ಮೀಕಿ ಮಹರ್ಷಿ ರವರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಾಲ್ಮೀಕಿ ಮಹರ್ಷಿಗಳು ತಮ್ಮ ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡರೂ ಕೂಡ ಇಡೀ ಜಗತ್ತೇ ಅವರನ್ನು ಗೌರವಿಸುವಂತೆ ತಮ್ಮ ಬದುಕನ್ನು ನಡೆಸಿದಂತಹ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಯಾರೇ ಆಗಲಿ ತಾವು ಮಾಡುವ ಕೆಲಸದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡರೆ ಆ ಕೆಲಸದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಶ್ರೀ ರಾಮಾಯಣ ಮಹಾ ಕಾವ್ಯವನ್ನು ರಚಿಸಿದಂತಹ ಆದಿ ಕವಿಗಳು. ಇವರು ಸಾಗಿ ಬಂದಿರುವ ಹಾದಿಯಲ್ಲಿ ಪ್ರಸ್ತುತ ದಿನಗಳಲ್ಲಿ ಸರ್ವರೂ ಸಾಗುವ ಮೂಲಕ ನಾಗರೀಕ ಸಮಾಜ ನಿರ್ಮಾಣಕ್ಕೆ ಸರ್ವರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ, ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ಗೌರವಾಧ್ಯಕ್ಷ ಮಾದನಾಯಕ, ಗ್ರಾಫಿಕ್ ಚಿತ್ರ ಕಲಾವಿದ ಡಾ.ಎಸ್.ಜೆ.ಗಣೇಶ್, ಪತ್ರಕರ್ತ ಕೆ.ಟಿ.ಮೋಹನ್ ಕುಮಾರ್, ಸೊಸೈಟಿಯ ನಿರ್ದೇಶಕರಾದ ಮಂಜುನಾಥ್, ಶೃತಿ ಶ್ರೀನಿವಾಸಗೌಡ, ಸಿಇಓ ಸಿಂಧು ಮಂಜುನಾಥ್, ಪಲ್ಲವಿ ಸೇರಿದಂತೆ ಹಲವರು ಇದ್ದರು.