Monday, May 19, 2025
Google search engine

Homeರಾಜ್ಯಏಪ್ರಿಲ್ 16,17 ರಂದು ಸಿಇಟಿ ಪರೀಕ್ಷೆ: ಸೀಟ್ ಬ್ಲಾಕಿಂಗ್‌ಗೆ ಕಡಿವಾಣ

ಏಪ್ರಿಲ್ 16,17 ರಂದು ಸಿಇಟಿ ಪರೀಕ್ಷೆ: ಸೀಟ್ ಬ್ಲಾಕಿಂಗ್‌ಗೆ ಕಡಿವಾಣ

ಬೆಂಗಳೂರು: ಎಂಜಿನಿಯರಿಂಗ್, ಪಶುವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ೨೦೨೫-೨೬ನೇ ಸಾಲಿನ ಪ್ರವೇಶಕ್ಕಾಗಿ ಏಪ್ರಿಲ್ ೧೬ ಮತ್ತು ೧೭ರಂದು ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ನಡೆಯಲಿದೆ.

ಸೀಟ್ ಬ್ಲಾಕಿಂಗ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ನಿರ್ಧರಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಂದು ಅರ್ಜಿಗೆ ಒಂದು ಮೊಬೈಲ್ ಸಂಖ್ಯೆ ಕಡ್ಡಾಯಗೊಳಿಸಿದೆ. ಅದೇ ಸಂಖ್ಯೆಗೆ ಬರುವ ಒಟಿಪಿ ದೃಢೀಕರಿಸಿದ ನಂತರವೇ ಅರ್ಜಿ ಭರ್ತಿ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ, ಪರೀಕ್ಷಾ ದಿನಾಂಕ, ಸೂಚನೆಗಳು, ಸೀಟು ಹಂಚಿಕೆ, ಪ್ರವೇಶ ಸೇರಿದಂತೆ ಎಲ್ಲ ಮಾಹಿತಿಗಳೂ ಅದೇ ಮೊಬೈಲ್ ಸಂಖ್ಯೆಗೆ ರವಾನೆಯಾಗಲಿವೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದೇ ಜ.೨೩ರಿಂದ ಫೆ.೨೧ರವರೆಗೆ ಅವಕಾಶ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಮಾಹಿತಿ ನೀಡಿದ್ದಾರೆ.

ಅಕ್ರಮ ತಡೆಗೆ ಅರ್ಜಿ ಭರ್ತಿ ಮಾಡುವ ಮತ್ತು ದಾಖಲೆಗಳ ಪರಿಶೀಲನಾ ಪ್ರಕ್ರಿಯೆಯಲ್ಲಿ ಹಲವು ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ. ಯಾರದ್ದೊ ಅರ್ಜಿಯನ್ನು, ಇನ್ಯಾರೊ ಭರ್ತಿ ಮಾಡಲು ಅವಕಾಶವೇ ಇರುವುದಿಲ್ಲ. ಪ್ರತಿ ಹಂತದಲ್ಲೂ ಪ್ರಮಾಣಿಕರಿಸಿ, ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ. ಅಕ್ರಮಗಳಿಗೆ ಬ್ರೇಕ್ ಹಾಕಿದಂತಾಗಲಿದೆ ಎಂದು ವಿವರಿಸಿದ್ದಾರೆ.

ಏ.೧೬ರಂದು ಬೆಳಿಗ್ಗೆ ೧೦.೩೦ರಿಂದ ಭೌತವಿಜ್ಞಾನ ಮತ್ತು ಮಧ್ಯಾಹ್ನ ೨.೩೦ರಿಂದ ರಸಾಯನ ವಿಜ್ಞಾನ ಹಾಗೂ ಏ.೧೭ರಂದು ಬೆಳಿಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಏ.೧೮ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.

ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ ಮತ್ತು ಫಾರ್ಮಾ-ಡಿ, ಕೃಷಿ ವಿಜ್ಞಾನ ಕೋರ್ಸ್ ಮತ್ತು ಬಿಎಸ್‌ಸಿ (ನರ್ಸಿಂಗ್) ಕೋರ್ಸ್‌ಗಳ ಪ್ರವೇಶಕ್ಕೂ ಇದೇ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ. ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಪ್ರವೇಶಕ್ಕೂ ಆನ್‌ಲೈನ್ ಮೂಲಕ ಹೆಸರು ನೊಂದಾಯಿಸಿಕೊಂಡು ಅರ್ಜಿ ಶುಲ್ಕ ಪಾವತಿಸಬೇಕು. ಆರ್ಕಿಟೆಕ್ಚರ್, ಬಿಪಿಟಿ, ಬಿಪಿಒ, ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳ ಪ್ರವೇಶಕ್ಕೆ ಇದೇ ಅರ್ಜಿಯೇ ಅನ್ವಯವಾಗಲಿದೆ.

ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು:

  • ಅರ್ಜಿ ಭರ್ತಿಗಾಗಿ ಲಾಗಿನ್ ಆಗಲು ಒಟಿಪಿ ಕಡ್ಡಾಯ.
  • ಒಂದು ಅರ್ಜಿಗೆ ಒಂದೇ ಮೊಬೈಲ್ ನಂಬರ್.
  • ಕೋರ್ಸ್‌ಗಳ ಪ್ರವೇಶದವರೆಗೂ ಮೊಬೈಲ್ ಸಂಖ್ಯೆ ಬದಲಾವಣೆಗೆ ಅವಕಾಶ ಇಲ್ಲ.
  • ಈ ಬಾರಿ ವಿದ್ಯಾರ್ಥಿಗಳು ಯಾವುದೇ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪಲೋಡ್ ಮಾಡುವ ಅಗತ್ಯವಿಲ್ಲ.
  • ವಿವಿಧ ಕೋಟಾಕ್ಕಾಗಿ ಸಲ್ಲಿಸಿದ ದಾಖಲೆಯಲ್ಲಿ ಯಶಸ್ವಿ ಪರಿಶೀಲನೆ ನಮೂದಾದರೆ ಅಂತಹ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಯಾವುದೇ ಕಚೇರಿ, ಕಾಲೇಜಿಗೆ ಹೋಗುವ ಅವಶ್ಯಕತೆ ಇಲ್ಲ.
  • ಯಶಸ್ವಿ ಪರಿಶೀಲನೆ ಆಗದಿದ್ದರೆ ಪಿಯು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರಿಂದ ಒಂದು ಸೆಟ್ ದೃಢೀಕರಿಸಿದ ಪ್ರತಿ ಸಲ್ಲಿಸಬೇಕು.
  • ರಾಜ್ಯದ ಪಿಯು ಕಾಲೇಜುಗಳಿಗೆ ಲಾಗಿನ್ ನೀಡಿ ಅಭ್ಯರ್ಥಿಗಳಿಂದ ಭರ್ತಿ ಮಾಡಿದ ಅರ್ಜಿಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಅದಕ್ಕಾಗಿ ತತ್ರಾಂಶ ಸಿದ್ದಪಡಿಸಲಾಗಿದೆ.
  • ಅಭ್ಯರ್ಥಿಗಳು ಪರಿಶೀಲನೆಗಾಗಿ ಬಿಇಒ ಕಚೇರಿಗೆ ಹೋಗುವ ಅಗತ್ಯವಿಲ್ಲ.
  • ಎನ್‌ಸಿಸಿ, ಕ್ರೀಡೆ, ಸೈನಿಕ, ಮಾಜಿ ಸೈನಿಕ, ಸಿಎಪಿಎಫ್, ಮಾಜಿ ಸಿಎಪಿಎಫ್, ಸ್ಕೌಟ್ ಮತ್ತು ಗೈಡ್ಸ್ ಆಂಗ್ಲೊ ಇಂಡಿಯನ್ಸ್ ಕೋಟದ ಅಡಿಯಲ್ಲಿ ಮೀಸಲಾತಿ ಬಯಸುವ ಅಭ್ಯರ್ಥಿಗಳು ಪ್ರಮಾಣ ಪತ್ರಗಳನ್ನು ಕೆಇಎಗೆ ಸಲ್ಲಿಸಲು ಪ್ರತ್ಯೇಕ ದಿನಾಂಕ ನೀಡಲಾಗುತ್ತದೆ.

ಡಿಸಿಇಟಿ: ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ೨ನೇ ವರ್ಷ ಅಥವಾ ೩ನೇ ಸೆಮಿಸ್ಟರ್‌ಗೆ ಸೇರಲು ಡಿಪ್ಲೊಮಾ ಸಿಇಟಿ. ಪರೀಕ್ಷೆ ಮೇ ೩೧, ಅರ್ಜಿ ಸಲ್ಲಿಕೆ ಏಪ್ರಿಲ್ ೨೪ರಿಂದ ಮೇ ೧೦ರವರೆಗೆ

ಪಿಜಿಸಿಇಟಿ (ಎಂಇ, ಎಂಟೆಕ್, ಎಂ.ಆರ್ಕಿಟೆಕ್ಚರ್) ಕೋರ್ಸ್‌ಗಳ ಪ್ರವೇಶ. ಪರೀಕ್ಷೆ ಮೇ ೩೧. ಅರ್ಜಿ ಸಲ್ಲಿಕೆ ಏಪ್ರಿಲ್ ೨೪ರಿಂದ ಮೇ ೧೦ರವರೆಗೆ

ಎಂಸಿಎ, ಎಂಬಿಎ: ಎಂಸಿಎ, ಎಂಬಿಎ ಹಾಗೂ ಎಂ.ಫಾರ್ಮ, ಫಾರ್ಮಾ-ಡಿ ಕೋರ್ಸ್‌ಗಳ ಪ್ರವೇಶಕ್ಕೆ ಜೂನ್ ೨೨ರಂದೇ ಪರೀಕ್ಷೆ ನಡೆಸಲಾಗುತ್ತದೆ. ಅರ್ಜಿ ಸಲ್ಲಿಕೆ ಏಪ್ರಿಲ್ ೨೪ರಿಂದ ಜೂನ್ ೧೦ರವರೆಗೆ

RELATED ARTICLES
- Advertisment -
Google search engine

Most Popular