ಬೆಂಗಳೂರು: ಹತ್ಯೆಗೆ ಒಳಗಾದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಓಂ ಪ್ರಕಾಶ್ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ನಿನ್ನೆ ಪತ್ನಿ ಪಲ್ಲವಿ ಹತ್ಯೆಗೈದಿದ್ದಾರೆ ಎಂಬ ಆರೋಪಕ್ಕೆ ಪೊಲೀಸ್ ದೃಢೀಕರಣ ಸಿಕ್ಕಿದ್ದು, ಪಲ್ಲವಿಯನ್ನು ಈಗಾಗಲೇ ಬಂಧಿಸಲಾಗಿದೆ.
ಈ ಮಧ್ಯೆ, ಓಂ ಪ್ರಕಾಶ್ ಅವರ ಪಾರ್ಥಿವ ಶರೀರವನ್ನು ಹೆಚ್.ಎಸ್.ಆರ್. ಲೇಔಟ್‌ನಲ್ಲಿರುವ ಟೆನ್ನಿಸ್ ಕೋರ್ಟ್‌ನಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಹಲವಾರು ಗಣ್ಯರು, ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಅವರ ಅಂತಿಮ ದರ್ಶನ ಪಡೆದರು. ಸಚಿವ ರಾಮಲಿಂಗಾರೆಡ್ಡಿಯೂ ಭಾಗಿಯಾಗಿ ಗೌರವ ಸಲ್ಲಿಸಿದರು.
ಬಳಿಕ ಪಾರ್ಥಿವ ಶರೀರವನ್ನು ವಿಲ್ಸನ್ ಗಾರ್ಡನ್ ಚಿತಾಗಾರಕ್ಕೆ ಕರೆದೊಯ್ಯಲಾಯಿತು. ಅಲ್ಲೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಪೊಲೀಸ್ ಪಡೆ ವತಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಓಂ ಪ್ರಕಾಶ್ ಅವರ ಪುತ್ರ ಕಾರ್ತಿಕೇಶ್ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಅಂತಿಮ ಕರ್ಮಗಳನ್ನು ನೆರವೇರಿಸಿ, ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ನೀಡಿದರು.
ಅವರ ಮರಣದಿಂದ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ದುಃಖದ ಛಾಯೆ ಮೂಡಿದ್ದು, ಸಮಾಜಕ್ಕೆ ನೀಡಿದ ಅವರ ಸೇವೆಯು ಸದಾ ಸ್ಮರಣೀಯವಾಗಲಿದೆ.