ವಿಜಯಪುರ: ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹತ್ತು ಮಹಾನಗರ ಪಾಲಿಕೆಗಳಿಗೆ ತಲಾ 200 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಒಟ್ಟು 2000 ಕೋಟಿ ರೂ. ಅನುದಾನ ಬಿಡುಗಡೆ ಆಗಿದ್ದು, ಈ ಹಣವನ್ನು ಮಹಾನಗರಗಳ ವ್ಯಾಪ್ತಿಯ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಹೇಳಿದರು.
ವಿಜಯಪುರ ನಗರದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದ್ದು, ಖಾಸಗಿ ಜಮೀನನ್ನು ಖರೀದಿಸಿ ಹೊಸ ಬಡಾವಣೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು, ಇದಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು. ಬಾಕಿ ಇರುವ ಯೋಜನೆಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಪರಿಶೀಲಿಸುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ಅವರು ಆದೇಶಿಸಿದರು.
ಪ್ರತಿ ವಾರ್ಡಿಗೆ 4 ಕೋಟಿ ರೂಪಾಯಿ
ಸಚಿವರು ಪ್ರತಿವಾರ್ಡಿಗೆ ತಲಾ 4 ಕೋಟಿ ರೂ. ಬಿಡುಗಡೆ ಮಾಡುವಂತೆ ಸೂಚಿಸಿ, ಯಾವುದೇ ವಿಳಂಬವಿಲ್ಲದೇ ಕಾಮಗಾರಿಗಳು ನಡೆಯಬೇಕು ಎಂದರು. ಕುಡಿಯುವ ನೀರಿನ ಕೊರತೆ ಕುರಿತು ಕೆಲ ಕಾರ್ಪೋರೇಟರ್‌ಗಳ ಮನವಿಗೆ ತಕ್ಷಣ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲಂಚಕ್ಕೆ ಬೇಡಿಕೆ ಇಟ್ಟರೆ ಕೂಡಲೇ ಸಸ್ಪೆಂಡ್
ಖಾತೆ ಸೇರಿದಂತೆ ಇನ್ನಿತರೆ ದಾಖಲಾತಿ ಮತ್ತು ನೋಂದಣಿ ಮಾಡಿಕೊಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪವನ್ನು ಆಲಿಸಿದ ಸಚಿವ ಬೈರತಿ ಸುರೇಶ್ ಅವರು, ಯಾವುದೇ ಕಾರಣಕ್ಕೂ ಇಂತಹ ಪ್ರಕರಣಗಳನ್ನು ಸಹಿಸುವುದಿಲ್ಲ. ಯಾವ ಅಧಿಕಾರಿ ಅಥವಾ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟರೆ ಅಂತಹವರನ್ನು ತಕ್ಷಣ ಸಸ್ಪೆಂಡ್ ಮಾಡುವುದಾಗಿ ಎಚ್ಚರಿಸಿದರು.