ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ 92ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಶುಭಾಶಯ ಕೋರಿದ್ದಾರೆ.
ಪ್ರಧಾನಿ ಮೋದಿ ಎಕ್ಸ್ನಲ್ಲಿ, “ದೇವೇಗೌಡರು ಸಾರ್ವಜನಿಕ ಸೇವೆಗೆ ಶ್ರದ್ಧೆಯೊಂದಿಗೆ ಸಲ್ಲಿಸಿದ ಸೇವೆಗಳಿಂದ ಎಲ್ಲೆಡೆ ಗೌರವಾರ್ಹರಾಗಿದ್ದಾರೆ. ಅವರ ಬುದ್ಧಿವಂತಿಕೆ ಮತ್ತು ಒಳನೋಟಗಳು ಸದಾ ಶಕ್ತಿಯ ಮೂಲವಾಗಿದೆ. ಅವರಿಗೆ ದೀರ್ಘ ಆಯುಷ್ಯ ಮತ್ತು ಉತ್ತಮ ಆರೋಗ್ಯ ಕರುಣಿಸಲಿ” ಎಂದು ಹಾರೈಸಿದ್ದಾರೆ.
ಸಿಎಂ ಸಿದ್ದರಾಮಯ್ಯ ದೇವೇಗೌಡರನ್ನು “ನಾಡಿನ ಹಿರಿಯ ರಾಜಕಾರಣಿ” ಎಂದು ಶ್ಲಾಘಿಸಿ, ದೇವರು ಅವರಿಗೆ ಉತ್ತಮ ಆರೋಗ್ಯ ನೀಡಲಿ ಎಂದು ಬರೆದುಕೊಂಡಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ತಮ್ಮ ತಂದೆ ದೇವೇಗೌಡರ ಬಗ್ಗೆ ಭಾವನಾತ್ಮಕವಾಗಿ ಬರೆದು, ಅವರು ತಮ್ಮ ಶಕ್ತಿ, ಧೈರ್ಯ, ಸ್ಫೂರ್ತಿ ಎಂಬುದಾಗಿ ಕರೆದಿದ್ದಾರೆ. ದೇವೇಗೌಡರ ಸಂಘರ್ಷ ಮತ್ತು ಸೇವೆ ತನ್ನ ಜೀವನದ ಪ್ರೇರಣೆ ಎಂದಿದ್ದಾರೆ.
ಈ ನಡುವೆ, ಪ್ರತಿಪಕ್ಷ ನಾಯಕ ಆರ್. ಅಶೋಕ್, ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಶುಭ ಹಾರೈಸಿದರು.