ವಿಶಾಖಪಟ್ಟಣಂ: ಆಟವಾಡುತ್ತಾ ಕಾರಿನೊಳಗೆ ಕುಳಿತ ನಾಲ್ವರು ಮಕ್ಕಳು ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಆಂಧ್ರಪ್ರದೇಶದ ದ್ವಾರಪುಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೃತರನ್ನು ಉದಯ್ (8), ಚಾರುಮತಿ (8), ಚರಿಷ್ಮಾ (6) ಮತ್ತು ಮನಸ್ವಿ (6) ಎಂದು ಗುರುತಿಸಲಾಗಿದೆ. ಚಾರುಮತಿ ಹಾಗೂ ಚರಿಷ್ಮಾ ಸಹೋದರಿಯರಾದರೆ, ಉಳಿದ ಇಬ್ಬರು ಅವರ ಸ್ನೇಹಿತರು.
ರಜೆಯ ಖುಷಿಯಲ್ಲಿ ಆಟವಾಡಲು ಹೊರಟಿದ್ದ ಮಕ್ಕಳು ಗ್ರಾಮದ ಮಹಿಳಾ ಮಂಡಲ ಕಚೇರಿಯ ಬಳಿ ನಿಲ್ಲಿಸಿದ್ದ ಕಾರು ನೋಡಿ ಒಳಗೆ ಹೋಗಿ ಆಟ ಆರಂಭಿಸುತ್ತಾರೆ. ಆಟದ ನಡುವೆ ಕಾರಿನ ಡೋರ್ ಲಾಕ್ ಆಗಿದ್ದು ಹೊರಗೆ ಬರಲಾಗದೆ ಕಾರಿನೊಳಗೆ ಸಿಲುಕುತ್ತಾರೆ. ಉಸಿರಾಟದ ತೊಂದರೆ ಅನುಭವಿಸಿ ಅಸ್ವಸ್ಥವಾಗುತ್ತಾರೆ.
ಮಕ್ಕಳು ಮನೆಗೆ ಬಾರದ ಕಾರಣ ಪೋಷಕರು ಹುಡುಕಾಟ ಆರಂಭಿಸುತ್ತಾರೆ. ಮೂರು ಗಂಟೆಗಳ ಹುಡುಕಾಟದ ಬಳಿಕ ಗ್ರಾಮಸ್ಥರು ಕಾರಿನೊಳಗಿನ ಮಕ್ಕಳನ್ನು ಗಮನಿಸಿ ಗಾಜು ಒಡೆದು ಅವರನ್ನು ಹೊರ ತೆಗೆಯುತ್ತಾರೆ. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಕ್ಕಳು ಮೃತಪಟ್ಟಿರುವುದು ದೃಢಪಟ್ಟಿದೆ.
ಈ ಘಟನೆ ಊರಿನಲ್ಲಿ ಆಘಾತ ಸೃಷ್ಟಿಸಿದೆ. ಪೋಷಕರ ಆಕ್ರಂದನ ಎಲ್ಲರ ಮನಕಲಕುವಂತಾಗಿದೆ. ಪೊಲೀಸರು ಕಾರಿನ ಮಾಲೀಕನ ಪತ್ತೆಗಾಗಿ ಶೋಧ ಆರಂಭಿಸಿದ್ದಾರೆ.