ಬೆಂಗಳೂರು: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವು ಜಾಗತಿಕ ಮಟ್ಟದಲ್ಲಿ ಸ್ಪಷ್ಟಪಡಿಸಲು, ಕೇಂದ್ರ ಸರ್ಕಾರ ರಚಿಸಿರುವ ಸರ್ವಪಕ್ಷ ಸಂಸದೀಯ ನಿಯೋಗದಲ್ಲಿ ಕರ್ನಾಟಕದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಸ್ಥಾನ ಪಡೆದಿದ್ದಾರೆ.
ಅವರು ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕಕ್ಕೆ ಮೇ 23ರಿಂದ ಜೂನ್ 6ರವರೆಗೆ ಭೇಟಿ ನೀಡಲಿದ್ದಾರೆ. ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ನಾಯಕ ಶಶಿ ತರೂರ್ ನೇತೃತ್ವದ ನಿಯೋಗದ ಭಾಗವಾಗಲಿದ್ದಾರೆ. ಈ ಪ್ರಯಾಣ 32 ದೇಶಗಳು ಹಾಗೂ ಯುರೋಪಿಯನ್ ಒಕ್ಕೂಟದ ಮಟ್ಟಿಗೆ ನಡೆಯುವ ಪ್ರಮುಖ ರಾಜತಾಂತ್ರಿಕ ಚಟುವಟಿಕೆಯಾಗಿದೆ. ನಿವೃತ್ತ ರಾಜತಾಂತ್ರಿಕರ ಬೆಂಬಲದೊಂದಿಗೆ, ನಿಯೋಗಗಳು ಭಾರತದ ಭಯೋತ್ಪಾದನೆ ವಿರುದ್ಧದ ದೃಢ ನಿಲುವು ಮತ್ತು ಗಡಿಯಾಚೆಗಿನ ದಾಳಿಗಳಿಗೆ ಪ್ರತಿ ಉತ್ತರ ನೀಡುವ ಹಕ್ಕನ್ನು ಪುನರುಚ್ಚರಿಸುವ ಗುರಿಯನ್ನು ಹೊಂದಿವೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.