Wednesday, May 21, 2025
Google search engine

Homeಅಪರಾಧನಕಲಿ ಟ್ರೇಡಿಂಗ್ ಆಪ್‌ಗೆ ಟೆಕಿ ಬಲಿ: ಸಾಫ್ಟ್‌ವೇರ್ ಎಂಜಿನಿಯರ್‌ ಗೆ 2.39 ಕೋಟಿ ವಂಚನೆ

ನಕಲಿ ಟ್ರೇಡಿಂಗ್ ಆಪ್‌ಗೆ ಟೆಕಿ ಬಲಿ: ಸಾಫ್ಟ್‌ವೇರ್ ಎಂಜಿನಿಯರ್‌ ಗೆ 2.39 ಕೋಟಿ ವಂಚನೆ

ಬೆಂಗಳೂರು: ಷೇರು ಮಾರುಕಟ್ಟೆ ಆಪ್‌ ಜಾಹಿರಾತು ನಂಬಿ ಸಾಫ್ಟ್‌ ವೇರ್‌ ಎಂಜಿನಿಯರ್‌ ವೊಬ್ಬರು 2.39  ಕೋಟಿ ರೂ. ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದು ಅವರು ವೈಟ್‌ ಫೀಲ್ಡ್‌ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.  

41 ವರ್ಷದ ಎಂಜಿನಿಯರ್‌ ಫೇಸ್‌ ಬುಕ್ ನೋಡುತ್ತಿದ್ದಾಗ ಆಲಿಸ್ ಬ್ಲೂ ಎಂಬ ಟ್ರೇಡಿಂಗ್ ವ್ಯವಹಾರದ ಜಾಹೀರಾತು ಕಾಣಿಸಿಕೊಂಡಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಆಲಿಸ್ ಬ್ಲೂ ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದಾರೆ. ಪೂಜಾ ಶೈನ್ ಎಂಬ ಹೆಸರಿನಲ್ಲಿ ಓರ್ವ ಯುವತಿ ಟೆಕಿಗೆ ಕರೆ ಮಾಡಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ನಂಬಿಸಿದ್ದಾಳೆ. ಆಕೆಯ ಮಾತುಗಳನ್ನು ನಂಬಿದ ಟೆಕಿ ಆಕೆ ಕಳುಹಿಸಿದ ಲಿಂಕ್ ಬಳಸಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಆರಂಭದಲ್ಲಿ 50 ಸಾವಿರ ಹೂಡಿಕೆ ಮಾಡಿದ್ದಾರೆ.

ಹೆಚ್ಚು ಹೆಚ್ಚು ಹಣ ಹೂಡಿಕೆ ಮಾಡಿದಷ್ಟೂ ಹೆಚ್ಚಿನ ಲಾಭ ಸಿಗಲಿದೆ ಎಂಬ ಪೂಜಾ ಮಾತನ್ನು ಆಕೆ ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅಪ್ಲಿಕೇಷನ್‌ ನಲ್ಲಿ ಲಾಭಾಂಶ ಬಂದಿರುವ ಅಂಕಿಅಂಶ ತೋರಿಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಲಾಭಾಂಶ ಪಡೆಯಲು ಪ್ರಯತ್ನಿಸಿದಾಗ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಕರೆ ಮಾಡಿ ವಿಚಾರಿಸಿದಾಗ ಮತ್ತಷ್ಟು ಹಣ ಪಾವತಿ ಮಾಡಬೇಕಿದೆ ಎಂದು ವಂಚಕರು ಹೇಳಿದ್ದಾರೆ. ಆಗ ಮತ್ತೆ ಲಕ್ಷಾಂತರ ರೂ. ವರ್ಗಾವಣೆ ಮಾಡಿದ್ದಾರೆ. ಆದರೂ ಲಾಭದ ಮೊತ್ತವನ್ನು ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆ ವೇಳೆಗೆ ಟೆಕಿ ರೂ. 2.39 ಕೋಟಿ ಹೂಡಿಕೆ ಮಾಡಿದ್ದರು. ಹತ್ತಾರು ಬಾರಿ ಪ್ರಯತ್ನಿಸಿದರೂ ವಂಚಕರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಟೆಕಿ ದೂರಿನಲ್ಲಿ ತಿಳಿಸಿದ್ದಾರೆ.

ಇವರ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಂಚಕರ ಬ್ಯಾಂಕ್ ಖಾತೆಗಳ ವಿವರ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್‌ ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular