ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು, ಹೆಚ್ಚು ಮಳೆ ಬೀಳುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಮಳೆಯಿಂದ ಉಂಟಾಗುವ ಹಾನಿಯನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಹೇಳಿದರು.
ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾಘಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಉತ್ತಮ ಮಳೆ ಆಗಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ, ತಹಶೀಲ್ದಾರ್‌ಗಳು ತಮ್ಮ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ, ಬೆಳೆ ಹಾನಿಯಾದರೆ ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಿದರು. ಮನೆ ಹಾನಿಗೆ ಸಂಬಂಧಿಸಿದಂತೆ ಸಮರ್ಪಕ ವರದಿ ನೀಡಿ, ಪಿಡಿ ಖಾತೆಯಲ್ಲಿ ಇರುವ ನಿಧಿಯಿಂದ ಪರಿಹಾರ ನೀಡಲು ಕ್ರಮವಹಿಸಲು ಸೂಚನೆ ನೀಡಿದರು.
ಕಬಿನಿ ನದಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಹಾಗೂ ಟಿ. ನರಸೀಪುರ ತಾಲ್ಲೂಕಿನಲ್ಲಿ ಪ್ರವಾಹ ಬರುವ ಸಾಧ್ಯತೆಗಳಿವೆ. ಈ ಪ್ರದೇಶಗಳಲ್ಲಿ ಪೂರ್ವ ಸಿದ್ಧತೆಗೈದು ಜನರ ಸ್ಥಳಾಂತರ, ಗಂಜಿ ಕೇಂದ್ರಗಳ ವ್ಯವಸ್ಥೆ ಮಾಡಬೇಕು. ಹೆಚ್.ಡಿ. ಕೋಟೆ, ಸರಗೂರು, ನಂಜನಗೂಡು ಪ್ರದೇಶಗಳಲ್ಲಿ ಹೆಚ್ಚು ಹಾನಿಯ ಸಾಧ್ಯತೆ ಇದ್ದು, ವಿದ್ಯುತ್ ಕಂಬಗಳು ಬೀಳುವಂತಹ ಪರಿಸ್ಥಿತಿಗೆ ಚೆಸ್ಕಾಂ ಅಧಿಕಾರಿಗಳು ಸಿದ್ಧರಾಗಿರಬೇಕು.
ಸೇತುವೆಗಳು ಮುಳುಗುವ ಪರಿಸ್ಥಿತಿಗೆ ಜೆಸಿಬಿ ವ್ಯವಸ್ಥೆ ಮಾಡಬೇಕು. ಅರಣ್ಯ ಪ್ರದೇಶದಲ್ಲಿ ಬಿದ್ದ ಮರಗಳು, ರೆಂಬೆ ಕೊಂಬೆಗಳ ತೆರವಿಗೆ ಕ್ರಮ ತೆಗೆದುಕೊಳ್ಳಬೇಕು. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.