ಬೆಂಗಳೂರು: ನಗರದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಕಾರ್ಯಕ್ರಮ ನಿಮಿತ್ತ ಹೊರಗೆ ಹೋಗಿದ್ದಾಗ ಮನೆಯ ಬಾಗಿಲು ಮುರಿದು 24 ಲಕ್ಷ ರೂ. ನಗದು ಸೇರಿದಂತೆ 37.8 ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ದೋಚಿರುವ ಪ್ರಕರಣ ಕತ್ರಿಗುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬನಶಂಕರಿ ಮೂರನೇ ಹಂತದ ಕತ್ರಿಗುಪ್ಪೆ ನಿವಾಸಿ ಸಾಫ್ಟ್ ವೇರ್ ಇಂಜಿನಿಯರ್ ವಿಶ್ವನಾಥ್ ವಿವಾಹ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಿಕ್ಕಮಗಳೂರಿಗೆ ಮೇ 21ರಂದು ಮಧ್ಯಾಹ್ನ 12.45 ಕ್ಕೆ ಹೊರಟು ಮೇ 22ರಂದು ರಾತ್ರಿ 11.15 ಕ್ಕೆ ಮನೆಗೆ ಮರಳಿದ್ದಾರೆ. ಈ ನಡುವೆ ಕಳ್ಳತನ ನಡೆದಿದೆ.
ಇವರದ್ದು ಡೂಪ್ಲೆಕ್ಸ್ ಮನೆ. ಕಳ್ಳರು ಮೇ 21ರಂದು ರಾತ್ರಿ 8.15ಕ್ಕೆ ಮನೆಯ ಮೂರನೆ ಮಹಡಿಯ ವರಾಂಡ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಅಲ್ಲಿದ್ದ ಸಿಸಿಟಿವಿಯನ್ನು ಮೂಲೆಯೊಂದಕ್ಕೆ ತಿರುಗಿಸಿದ್ದಾರೆ. ಕೊಠಡಿ ಪ್ರವೇಶಿಸಿ ವಾರ್ಡ್ ರೋಬ್ ಮುರಿದು ಲಾಕರ್ ಅನ್ನೂ ಒಡೆದು ಬಟ್ಟೆ ಮತ್ತಿತರ ವಸ್ತುಗಳನ್ನು ಚೆಲ್ಲಾಡಿದ್ದಾರೆ. ಸಿಕ್ಕಿದ್ದನ್ನು ದೋಚಿಕೊಂಡು ಮೂರನೇ ಮಹಡಿಯಿಂದಲೇ ಹೊರಗೆ ಹೋಗಿದ್ದಾರೆ.
ಮನೆಯಲ್ಲಿದ್ದ 24 ಲಕ್ಷ ರೂ. ನಗದು, ವಿವಿಧ ಬಗೆಯ ಚಿನ್ನಾಭರಣಗಳು, ಒಂದೂವರೆ ಕೆಜಿ ಬೆಳ್ಳಿ ವಸ್ತುಗಳನ್ನುಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ ರೂ.37.8 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.