ಮಂಗಳೂರು (ದಕ್ಷಿಣ ಕನ್ನಡ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹಾನಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಅಧಿಕಾರಿಗಳು ತಾಲೂಕು ಕೇಂದ್ರ ಸ್ಥಳಗಳಲ್ಲಿದ್ದು, ಸಕ್ರೀಯವಾಗಿ ಕಾರ್ಯನಿರ್ವಹಿಸುವಂತೆ ಅವರು ತಿಳಿಸಿದರು.
2025ನೇ ಸಾಲಿನ ಮುಂಗಾರು/ ಪೂರ್ವ ಮುಂಗಾರು ಮಳೆ ಅವಧಿಯ ಪೂರ್ವ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಎಲ್ಲಾ ಇಲಾಖೆಯ ಅಧಿಕಾರಿಗಳು ಪ್ರವಾಹ/ ಭೂಕುಸಿತ ಪ್ರದೇಶಗಳಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತುರ್ತು ಕಾರ್ಯಾಚರಣೆಗಾಗಿ ಸನ್ನಧ್ಧವಾಗಿರಬೇಕು ಹಾಗೂ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಯಾವುದೇ ತಪ್ಪು ಆಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.
ಶಾಲೆ ಪುನರಾರಂಭವಾಗುವ ಸಮಯದಲ್ಲಿ ಶಾಲಾ ಮಕ್ಕಳು ನದಿ, ತೋಡು ಇತ್ಯಾದಿ ದಾಟಿ ಬರುವಂತಹಾ ಪ್ರದೇಶಗಳಲ್ಲಿ ಬದಲಿ ವ್ಯವಸ್ಥೆಗಳನ್ನು ಕಲ್ಪಿಸಿರುವ ಬಗ್ಗೆ ಮತ್ತು ವಿಪತ್ತು ನಿರ್ವಹಣೆಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪಿ.ಡಿ ಖಾತೆಯಲ್ಲಿ ಅನುದಾನ ಲಭ್ಯವಿರುವ ಬಗ್ಗೆ ಸಚಿವರು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದರು. ಸಾಮಾಜಿಕ ಜಾಲತಾಣಗಳ ಮೂಲಕ ಜಿಲ್ಲಾಡಳಿತದಿಂದ ತೆಗೆದುಕೊಂಡಿರುವ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ರವಾನಿಸಲು ಸೂಚಿಸಿದರು.
ನಂತರ ಮಂಗಳೂರು ನಗರದಲ್ಲಿ ಮನೆಗಳಲ್ಲಿ ನೀರು ನುಗ್ಗುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ. ಭಾರೀ ಗಾಳಿಗೆ ಮರಗಳು ರಸ್ತೆ, ಮನೆಗಳ ಮೇಲೆ ಬಿದ್ದಾಗ ತಕ್ಷಣ ಸ್ಪಂದಿಸಿ ತೆರವು ಕಾರ್ಯಾಚಣೆಕೈಗೊಳ್ಳಲು ಸಚಿವರು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಾಸ್ತವ್ಯದ ಮನೆಯ ಸಮೀಪ ಹಲವು ಪ್ರದೇಶಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು ಈ ಕುರಿತು ಎಚ್ಚರ ವಹಿಸಬೇಕಾಗಿದೆ. ಇಂತಹ ಅಪಾಯದ ಪ್ರದೇಶದಲ್ಲಿರುವ ಮನೆಗಳಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸುವುದು. ಸುರಕ್ಷಿತವಲ್ಲದ ಅಂಗನವಾಡಿ ಶಾಲಾ ಕಟ್ಟಡದ ಕುರಿತು ಎಚ್ಚರ ವಹಿಸಬೇಕು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳು ನಡೆಯುವ ಪ್ರದೇಶದಲ್ಲಿ ಮಳೆ ನೀರು ತಗ್ಗಿನಲ್ಲಿರುವ ವಸತಿ ಪ್ರದೇಶಕ್ಕೆ ಹರಿದು ಬರುತ್ತಿದ್ದು ತಕ್ಷಣ ಇದನ್ನು ಸರಿಪಡಿಸಬೇಕು. ಪಂಪ್ ವೆಲ್. ಜಂಕ್ಷನ್ನಂತಹ ಕೆಲವು ಕಡೆ ನೀರು ಸರಾಗವಾಗಿ ಹರಿಯದೇ ರಸ್ತೆಯಲ್ಲಿಯೇ ನಿಂತು ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದ್ದು ತಕ್ಷಣ ಸರಿಪಡಿಸುವಂತೆ ಸಚಿವರು ಸೂಚಿಸಿದರು.
ಗಾಳಿ ಮಳೆಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದ್ದು ಇಂತಹ ಸಂದರ್ಭದಲ್ಲಿ ತಂತಿಯಲ್ಲಿ ವಿದ್ಯುತ್ ಪ್ರವಹಿಸಿ ಅಪಾಯ ಉಂಟಾಗದಂತೆ ಎಚ್ಚರ ವಹಿಸಬೇಕು. ಕೃತಕ ನೆರೆ ಭೀತಿ ಉಂಟಾಗುವ ಪ್ರದೇಶ ನದಿ ಪಾತ್ರದಲ್ಲಿರುವ ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಸಂದರ್ಭ ಎದುರಾಗಿದ್ದು ಇಂತಹ ಅಪಾಯ ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವುದು ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಆವರಣವಿಲ್ಲದ ಕೆಂಪು ಕಲ್ಲಿನ ಕೋರೆ, ಕೆರೆಗಳು, ಹಾಗೂ ನದಿಯಲ್ಲಿ ಯಾರು ಈಜಲು ತೆರಳದಂತೆ ಎಚ್ಚರವಹಿಸಲು ದಿನೇಶ್ ಗುಂಡೂರಾವ್ ತಿಳಿಸಿದರು.
ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗೆ ಮರ ಬೀಳುವುದು ಆವರಣ ಗೋಡೆ ಕುಸಿಯುವುದು, ವಿದ್ಯುತ್ ಕಂಭಕ್ಕೆ ಹಾನಿ, ಅಂಗಡಿಗಳಿಗೆ ನೀರು ನುಗ್ಗುವುದು, ರಸ್ತೆಗೆ ಹಾನಿ ಸಂಭವಿಸಿರುವ ವರದಿಗಳಿದ್ದು ತುರ್ತು ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ಮಂಗಳೂರು ಹೊರ ವಲಯದ ವಾಮಂಜೂರು ಸಮೀಪ ಕೆತ್ತಿಕಲ್ಲಲ್ಲಿ ಗುಡ್ಡ ಕುಸಿತ ಉಂಟಾಗಿದ್ದರಿಂದ ಈ ಬಾರಿ ಹೆಚ್ಚಿನ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು ಹಾಗೂ ಬಿ.ಇ.ಓ. ಗಳುಉಪಸ್ಥಿತರಿದ್ದರು.